ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಬಿಜೆಪಿ ಡಾ.ಸಿ.ಎನ್. ಮಂಜುನಾಥ್ ಮಾತನಾಡಿದರು ಬೆಂಗಳೂರು:''ಈವರೆಗೂ ಚಿಕಿತ್ಸೆ ಮೊದಲು, ಹಣ ಪಾವತಿ ನಂತರ ಅಂತಿದ್ದೆ. ಈಗ ಮತ ಮೊದಲು, ಸೇವೆ ನಿರಂತರ ಎನ್ನುವ ಘೋಷ ವಾಕ್ಯದಲ್ಲಿ ಕೆಲಸ ಮಾಡುತ್ತೇನೆ'' ಎಂದು ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ''ನೀವೆಲ್ಲಾ ಬಂದಿರೋದು ನೋಡಿದ್ರೆ ಆನೆ ಬಲ ಬಂದಂತಾಗಿದೆ. ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಿ. ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸ್ತಿದ್ದೇವೆ. ನಿಜವಾದ ಬಡತನ ನೋಡಬೇಕಾದ್ರೆ ರೈಲಿನಲ್ಲಿ ಪ್ರಯಾಣ ಮಾಡಬೇಕು. ಪ್ರಯಾಣ ಮಾಡುವಾಗ ಸಿಗೋ ಮನೆ, ಶೌಚಾಲಯ ಪರದಾಟ ಇದೆಲ್ಲವೂ ಕಣುತ್ತೇವೆ. ಅಂತ ಸಮಸ್ಯೆ ಬಗೆಹರಿಸಿದ್ದು ಮೋದಿ ಅವರು. ಬೆಂಗಳೂರು ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆ ನಿಡೀದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಟೂ ಅತ್ಯಂತ ಹೆಸರು ಪಡೆದಿದೆ.
ಸರ್ಕಾರ ಎಲ್ಲರೂ ಮಾಡ್ತಾರೆ. ಆದ್ರೆ, ಆಡಳಿತ ಮಾಡೋದು ಮುಖ್ಯ. ಅನುದಾನ ಅನುಷ್ಠಾನ ಮಾಡೋದು ಬಹಳ ಮುಖ್ಯ. ಎನ್‌ಡಿಎ ಅಭ್ಯರ್ಥಿಯಾಗಿ ನನ್ನನ್ನ ಕಣಕ್ಕೆ ಇಳಿಸಿದ್ದಾರೆ. ಎಲ್ಲರೋ ನಾವು 400ರ ಪಟ್ಟಿಯಲ್ಲಿ ಇರ್ತೇವೆ. ಮತದಾರರ ಆಶೀರ್ವಾದ ಇರಬೇಕು. ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದೇನೆ. ಇದು ಪ್ರತಿಷ್ಠಿತ ಕ್ಷೇತ್ರವಾಗಿದೆ. ನಾನೀಗಾಗಲೇ ಎಲ್ಲಾ ಕಡೆ ಸುತ್ತುತ್ತಿದ್ದೇನೆ. ನಾನು ಗೆದ್ದೇ ಗೆಲ್ಲುವ ವಿಶ್ವಾಸ ಇದೆ'' ಎಂದರು.
''ಹೃದಯಾಘಾತ ಅನ್ನೋದು ಕೇವಲ ಶ್ರೀಮಂತ ಕಾಯಿಲೆ ಅಲ್ಲ. ಎಲ್ಲಾ ಜನರಿಗೂ ಬರ್ತಿದೆ. ಹೃದಯಾಘಾತ ಆದಾಗ ಸ್ಟಂಟ್ ಅಳವಡಿಸೋದು ಮುಖ್ಯ. ಹಿಂದೆ ಸ್ಟಂಟ್‌ಗೆ 75 ಸಾವಿರ ಇತ್ತು. ಈಗ ಮೋದಿ ಸರ್ಕಾರ 25 ಸಾವಿರಕ್ಕೆ ಇಳಿಸಿದೆ. ಈವರೆಗೂ ಚಿಕಿತ್ಸೆ ಮೊದಲು, ಹಣ ಪಾವತಿ ನಂತರ ಅಂತಿದ್ದೆ. ಈಗ ಮತ ಮೊದಲು, ಸೇವೆ ನಿರಂತರ'' ಎಂದು ನುಡಿದರು.
ಬೆಂಗಳೂರು ಕೇಂದ್ರ ಅಭ್ಯರ್ಥಿ ಪಿ.ಸಿ. ಮೋಹನ್ ಮಾತನಾಡಿ, ''ಮೋದಿ 10 ವರ್ಷದ ಸಾಧನೆಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲಿದ್ದೇವೆ. ಭ್ರಷ್ಟಾಚಾರ ರಹಿತ ಕಪ್ಪುಚುಕ್ಕೆ ಇಲ್ಲದ ಆಡಳಿತ ನೀಡಿದ್ದಾರೆ. ಸಬ್ ಅರ್ಬನ್ ರೈಲು ಮಂಜೂರು ಮಾಡಿ ಅನುದಾನ ನೀಡಿದ್ದಾರೆ. ಮೆಟ್ರೋಗೆ 26 ಸಾವಿರ ಕೋಟಿ ಹಣ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರ ಕೋಟಿ ವೆಚ್ಚದಲ್ಲಿ ಕೆಲಸ ಆಗಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿ ಆಗಿದೆ. ಕಂಟೋನ್ಮೆಂಟ್ ಸ್ಟೇಷನ್ ವಿಮಾನ ನಿಲ್ದಾಣ ರೀತಿ ಅಭಿವೃದ್ಧಿ ಆಗುತ್ತಿದೆ'' ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ''ಇಡೀ ರಾಜ್ಯದಲ್ಲಿ ಮೋದಿ ಸುನಾಮಿ ಇದೆ. ಯಾವುದೇ ನಾಯಕರಿಗೆ ಎರಡನೇ ಬಾರಿಗೆ ಚುನಾವಣೆಗೆ ಹೋದಾಗ ಆಡಳಿತ ವಿರೋಧಿ ಅಲೆ ಎದುರಾದರೆ ಮೋದಿಗೆ ಜನಪ್ರೀತೆಯ ಹೆಚ್ಚುತ್ತಿದೆ. ಮೋದಿಗೆ ಮತ ಹಾಕಲು ಜನರೇ ನೂರಾರು ಕಾರಣವನ್ನು ಕೊಡುತ್ತಿದ್ದಾರೆ. 10 ವರ್ಷದ ಹಿಂದೆ ಭ್ರಷ್ಟಾಚಾರದ ಸುದ್ದಿಗಳೇ ಬರುತ್ತಿದ್ದರು. 2ಜಿ ಹಗರಣ, ಅಗಸ್ಟಾ ವೆಸ್ಟ್ ಲ್ಯಾಂಡ್, ಕಾಮನ್ ವೆಲ್ತ್ ಹಗರಣಗಳಿದ್ದವು. ಜನರಿಗೆ ಸರ್ಕಾರದ ಮೇಲೆ ನಂಬಿಕೆಯೇ ಹೋಗಿತ್ತು. ಆದರೆ, ಇಂದು ಮೋದಿ ಕಾಲದಲ್ಲಿ ಎಲ್ಲಾ ಬದಲಾವಣೆ ಆಗಿದೆ. ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ'' ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.
ಬೆಂಗಳೂರು ಉತ್ತರ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ''ದೇಶಕ್ಕೆ ನಿರ್ಣಾಯಕ ಚುನಾವಣೆ, 2014ರಲ್ಲಿ ಮೊದಲ ಬಾರಿ ಗೆದ್ದು ಅಧಿಕಾರಕ್ಕೆ ಬಂದಾಗ ಯುಪಿಎ ಮಾಡಿತ ತಪ್ಪಿನ ಹೊಂಡ ತುಂಬಲು 10 ವರ್ಷ ಬೇಕಾಯಿತು. ಹೊಂಡ ಮುಚ್ಚಿ ಅಭಿವೃದ್ಧಿ ಮಾಡಲು ಮತ್ತೆ 10 ವರ್ಷ ಬೇಕು ಎಂದಿದ್ದರು. ಈಗ 10 ವರ್ಷ ಆಗಿದೆ. ವಿದೇಶದಲ್ಲಿ ಕೆಂಪುಹಾಸಿನ ಸ್ವಾಗತ ನಮ್ಮ ದೇಶಕ್ಕೆ ಸಿಗುವಂತೆ ಮಾಡಿದ್ದಾರೆ. ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ದೇಶದ ರಕ್ಷಣೆಗೆ ವ್ಯವಸ್ಥೆ ರೂಪಿಸಬೇಕು, ಜನರ ಬದುಕು ಹಸನು ಮಾಡುವ ವ್ಯವಸ್ಥೆ ಮಾಡುವ ಚಿಂತನೆಯಲ್ಲಿದ್ದಾರೆ'' ಎಂದು ಹೇಳಿದರು. ''ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಆದರೆ, ಈ ಬಾರಿ ಮನೆ ಮನೆಗೆ ಹೋಗಿ ಜನರನ್ನು ಸಂಪರ್ಕಿಸಬೇಕು. ಶೇ.90 ರಷ್ಟು ಮತದಾನವಾಗುವಂತೆ ಮಾಡಬೇಕು'' ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ ಸುಧಾಕರ್ ಮಾತನಾಡಿ, ''400 ಸ್ಥಾನ ಬರಲು ರಾಜ್ಯದಲ್ಲಿ 28 ಸ್ಥಾನವನ್ನೂ ನಮ್ಮ ಮೈತ್ರಿಕೂಟ ಗೆಲ್ಲಬೇಕು, 10 ವರ್ಷದ ನಂತರ ಆಡಳಿತ ವಿರೋಧಿ ಅಲೆ ಬರಲಿದೆ. ಆದರೆ, ಮೋದಿ ವಿಚಾರದಲ್ಲಿ ವಿರುದ್ಧವಾಗಿದೆ. ಮೋದಿ ಪರ ಅಲೆ ಹೆಚ್ಚಾಗಿದೆ, ಅದನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳಬೇಕು'' ಎಂದರು.
''ಗ್ಯಾರಂಟಿಗಳೇ ಆಧಾರ, ಆದರೆ ನಿಜವಾದ ಭವಿಷ್ಯ ಕಟ್ಟಿಕೊಡಲು ಆಗುತ್ತಾ? ರಾಜ್ಯದಲ್ಲಿ ಕಾಂಗ್ರೆಸ್, ದೇಶದಲ್ಲಿ ಮೋದಿ ಸರ್ಕಾರ ಇದೆ. ಕಾಂಗ್ರೆಸ್ನದ್ದು ಕಿತ್ತುಕೊಳ್ಳುವ ಸರ್ಕಾರವಾದರೆ ಮೋದಿ ಸರ್ಕಾರ ಕೊಡುವ ಸರ್ಕಾರವಾಗಿದೆ. ಕಿಸಾನ್ ಸಮ್ಮಾನ್ ಅನ್ನು ರೈತರಿಂದ ಕಿತ್ತುಕೊಂಡಿದೆ. ವಿದ್ಯಾಸಿರಿ ವಿದ್ಯಾರ್ಥಿ ವೇತನ ಕಿತ್ತುಕೊಂಡಿದ್ದಾರೆ. ಅಹಿಂದ, ದೀನ ದಲಿತ, ಬಡವರ ಉದ್ದಾರ ಎನ್ನುತ್ತಾರೆ. ಆದರೆ, ಎಸ್ಸಿ,ಎಸ್ಟಿ ಮೀಸಲು ಹಣವನ್ನು ಗ್ಯಾರಂಟಿಗಳಿಗೆ ಉಪಯೋಗ ಮಾಡಿದ್ದಾರೆ. ದೇಶದ ಅತ್ಯಂತ ಎತ್ತರದ ಹಿಂದುಳಿದ ವರ್ಗದ ನಾಯಕ ನರೇಂದ್ರ ಮೋದಿ, ಹೆಮ್ಮೆಯಿಂದ ಮತ ಕೇಳುವ ಅವಕಾಶ ನಮಗಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೆಪಿಸಿಸಿಗೆ ಮೇಜರ್ ಸರ್ಜರಿ: ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿ ನೂತನ ಪದಾಧಿಕಾರಿಗಳ ನೇಮಕ - KPCC