ನಿಖಿಲ್ ಕುಮಾರಸ್ವಾಮಿ ಹೇಳಿಕೆ ಮಂಡ್ಯ:ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಯಾವುದೇ ಒತ್ತಡ ಬಂದರೂ ನಾನು ನಿಲ್ಲಲ್ಲ ಎಂದು ಮಂಡ್ಯ ಸ್ಪರ್ಧೆ ಚರ್ಚೆ ಕುರಿತು ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದ ಪಾಂಡವಪುರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಧ್ಯಮದವರ ಜೊತೆ ಮಾತನಾಡಿ, ನನ್ನ ಹಾಗೂ ಹೆಚ್ಡಿಕೆ ಸ್ಪರ್ಧೆಗೆ ಕಾರ್ಯಕರ್ತರ, ಮುಖಂಡರ ಒತ್ತಡ ಇದೆ. ನನ್ನ ಮಾತು ಎಲ್ಲಾ ಸಮಯದಲ್ಲೂ ಒಂದೇ. ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಯಾವುದೇ ಒತ್ತಡ ಬಂದರೂ ನಾನು ನಿಲ್ಲಲ್ಲ ಎಂದು ಹೇಳಿದರು.
ಸೀಟು ಹಂಚಿಕೆ ಬಗ್ಗೆ ಇನ್ನು ತೀರ್ಮಾನ ಆಗಿಲ್ಲ. NDA ಮೈತ್ರಿಕೂಟದಲ್ಲಿ ಯಾವ ರೀತಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಿದೆ. ನನ್ನ ಪ್ರವಾಸ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಲಾರ, ಹಾಸನ, ಮೈಸೂರು ಸೇರಿದಂತೆ ಎಲ್ಲ ಕಡೆ ಪ್ರವಾಸ ಮಾಡುತ್ತೇನೆ. ನಾನು ಮಂಡ್ಯ ಅಭ್ಯರ್ಥಿ ಆಗಿದ್ದ ಕಾರಣ ಮಂಡ್ಯದಲ್ಲಿ ಹೆಚ್ಚೆಚ್ಚು ಓಡಾಡಲು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಭೇಟಿ ಕೊಡುತ್ತೇನೆ ಎಂದರು.
ಇನ್ನು ಮೈತ್ರಿಗೆ ಬಿಜೆಪಿ ನಾಯಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ನಿನ್ನೆಯ ಅಮಿತ್ ಶಾ ಅವರ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಸಂದೇಶ ಹೋಗಿದೆ. ನಮ್ಮ ಕಡೆಯಿಂದ ಯಾವುದೇ ಅಸಮಾಧಾನ ಇಲ್ಲ. ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ.
ಮೂರನೇ ಬಾರಿ ಮೋದಿ ಪ್ರಧಾನಿ ಆಗಬೇಕು ಎಂಬುದು ನಮ್ಮ ಆಶಯ. ನಾವು ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಲ್ಲ ಎಂದರು.
ಕುಮಾರಣ್ಣ ಅವರಿಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಒತ್ತಾಯ ಇದೆ. ಕುಮಾರಣ್ಣ ನಮ್ಮ ರಾಜ್ಯಕ್ಕೆ ಬೇಕು. ಕುಮಾರಣ್ಣ ಲೋಕಸಭಾ ಸ್ಪರ್ಧೆ ಮಾಡೋದು ಬಿಡೋದು ಮುಂದೆ ಗೊತ್ತಾಗುತ್ತೆ. ಅವರ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ, ಪಕ್ಷದ ವರಿಷ್ಠರ ತೀರ್ಮಾನ ಮಾಡ್ತಾರೆ. ಕುಮಾರಣ್ಣ ರಾಜ್ಯಕ್ಕೆ ಬೇಕು ಅಂತಾ ನಮ್ಮ ಶಾಸಕರು ಮುಖಂಡರ ಕೂಗಾಗಿದೆ. ಕೆಲವರು ಕುಮಾರಣ್ಣ ಕೇಂದ್ರಕ್ಕೆ ಹೋಗಲಿ ಅಂತಾರೆ. ಕೆಲವರು ರಾಜ್ಯದಲ್ಲಿ ಉಳಿದುಕೊಳ್ಳಲಿ ಅಂತಾರೆ. ಅಂತಿಮವಾಗಿ ಏನ್ ಆಗುತ್ತೆ ಅನ್ನೋದನ್ನು ಕಾದು ನೋಡೋಣ ಎಂದರು.
ನನ್ನ ಸ್ಪರ್ಧೆಗೆ ತೆರೆ ಬಿದ್ದಿದೆ. ಏನೇ ಕೇಳಿದ್ರು ಇದೇ ಉತ್ತರ. 2019ರ ಸೋಲಿನ ಬಗ್ಗೆ ಚಿಂತಿಸಿ ಫಲವಿಲ್ಲ. ಮುಂದೆ ಆಗುವುದರ ಬಗ್ಗೆ ಯೋಚನೆ ಮಾಡಬೇಕು ಅಷ್ಟೇ. ನಾನು ಪಾಸಿಟಿವ್ ಡೈರಕ್ಷನ್ ಅಲ್ಲಿ ಹೋಗಬೇಕು ಎಂಬ ಮನಸ್ಥಿತಿಯಲ್ಲಿ ಇದ್ದೀನಿ. ಕಳೆದು ಹೋಗಿರುವ ವಿಚಾರದ ಬಗ್ಗೆ ನಾನು ಪ್ರಾಮುಖ್ಯತೆ ಕೊಡಲ್ಲ. ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್‌ಗೌಡ ಎಲ್ಲರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಅರ್ಹರಿದ್ದಾರೆ. ಪಕ್ಷದ ವರಿಷ್ಠರು ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. 28 ಕ್ಷೇತ್ರಗಳ ಪಟ್ಟಿ ಒಂದೇ ಬಾರಿ ಬಿಡುಗೆಯಾಗುತ್ತೆ. ಬಿಜೆಪಿ ಅವರು, ಸುಮಲತಾ ಅವರಿಗೆ ಕೇಳಲು ಅಧಿಕಾರ ಇದೆ, ಕೇಳ್ತಾರೆ. ಅಂತಿಮವಾಗಿ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಮೈತ್ರಿ ಬಗ್ಗೆ ಮಾತನಾಡುವವರ ಬಗ್ಗೆ ಅಮಿತ್ ಶಾ ಅವರಿಗೆ ಬಿಜೆಪಿ ನಾಯಕರಿಗೆ ಸಂದೇಶ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಮೈತ್ರಿ ಬಗ್ಗೆ ಗೊಂದಲ ಇಲ್ಲ. ನಮ್ಮಲ್ಲಿ ಯಾರು ಅಪಸ್ವರದ ಮಾತನ್ನು ಹೇಳಿಲ್ಲ ಎಂದರು.
ಇದೇ ವೇಳೆ , ಮಾಜಿ ಸಚಿವ ಪುಟ್ಟರಾಜು ಮಾತನಾಡಿ ಮಂಡ್ಯ ಜಿಲ್ಲೆಯ ನಾಯಕರು ದೇವೇಗೌಡರ ಕುಟುಂಬದಿಂದ ಮಂಡ್ಯದಿಂದ ಸ್ಪರ್ಧೆಯಾಗಬೇಕು ಎಂದು ಒತ್ತಾಯ ಮಾಡಿದ್ದೇವೆ. ವಿಶೇಷವಾಗಿ ನಿಖಿಲ್ ಅವರೇ ಸ್ಪರ್ಧೆ ಮಾಡಬೇಕು ಎಂದು ಈಗಲೂ, ನಾಳೆಯೂ ಒತ್ತಾಯ ಮಾಡ್ತೀವಿ. ಈ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೆ ಅದಕ್ಕೆ ನಾವೆಲ್ಲರೂ ಬದ್ಧ. ನಿಖಿಲ್ ಅವರಿಗೆ ಮಂಡ್ಯ ಜಿಲ್ಲೆಯ ಜನ ಕಳೆದ ಬಾರಿ ಮನಸ್ಸಿಗೆ ನೋವು ಮಾಡಿದ್ದೇವೆ. ಅದನ್ನು ಸರಿ ಪಡಿಸಲು ಈಗಲೂ ನಿಖಿಲ್ ಅಭ್ಯರ್ಥಿ ಆಗಬೇಕೆಂದು ಕೇಳಿಕೊಳ್ಳುತ್ತೇವೆ. ಕುಮಾರಣ್ಣ ಅಥವಾ ನಿಖಿಲ್ ಇಬ್ಬರಲ್ಲಿ ಯಾರೇ ಬಂದರು ಸ್ವಾಗತ ಮಾಡ್ತೀವಿ ಎಂದರು.
ಓದಿ:ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಜನಪ್ರಿಯ ಬಜೆಟ್ ನೀಡುತ್ತದೆಯೇ?