ಬೆಂಗಳೂರು:ನಾನು ನನ್ನ ಜೀವಮಾನದಲ್ಲಿಯೇ ಇಂತಹ ಕಳಪೆ ಮುಂಗಡ ಪತ್ರವನ್ನು ನೋಡಿರಲಿಲ್ಲ. 14 ಬಜೆಟ್‌ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇಂತಹ ಕಳಪೆ 15ನೇ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನವದೆಹಲಿ ಪ್ರವಾಸದಲ್ಲಿರುವ ಅವರು, ರಾಜ್ಯ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಜೆಟ್‌ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆಯೇ ಹೊರತು, ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು? ಎಂಬುದನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಆಯವ್ಯಯ ಕಾಣುತ್ತಿದೆ. ವಾಸ್ತವಿಕ ಅಂಕಿಸಂಖ್ಯೆಗಳನ್ನು ನೀಡದೆ ಕೇವಲ ಕಾಲ್ಪನಿಕ ಅಂಕಿಸಂಖ್ಯೆಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ ಅನುದಾನ ಬರಬೇಕಿತ್ತು ಎಂದು ಸಬೂಬು ಹೇಳುತ್ತಾ, ರಾಜ್ಯದ ಜನರನ್ನು ದಿಕ್ಕು ತಪ್ಪಿಸಲೆಂದೇ ಮಾಡಿದ ಆಯವ್ಯಯದಂತೆ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಆಯವ್ಯಯ ರಾಜ್ಯದ ಜನರಿಗೆ ಮಾಡಿದ ಮಹಾ ಮೋಸದಂತೆ ಗೋಚರವಾಗುತ್ತಿದೆ. ರಾಜ್ಯದ ಜನರಿಗೆ ಮೋಸ ಮಾಡುವುದಿರಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಗೆ ಯಾವುದೇ ಅನುದಾನ ನೀಡದೆ ಅವರಿಗೂ ಮೋಸ ಹಾಗೂ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತಿದೆ. ಡಿ.ಕೆ.ಶಿವಕುಮಾರ್ "ಮೇಕೆದಾಟು" ಪಾದಯಾತ್ರೆ ಮಾಡಿ ಸಾಧನೆ ಮಾಡಿದ್ದರು. ಆದರೆ ಈ ಯೋಜನೆಯನ್ನು ಆರಂಭಿಸುವ ಯಾವ ಖಾತರಿಯೂ ಈ ಆಯವ್ಯಯದಲ್ಲಿಲ್ಲ. ಕೃಷ್ಣ ಕೊಳ್ಳದ ಯೋಜನೆಗಳಿಗೆ ಹಾಗೂ ಮಹಾದಾಯಿ ಯೋಜನೆ ಹಾಗೂ ನವಿಲೆ ಜಲಾಶಯ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಇದರಿಂದ ರೈತರಿಗೆ ಹಾಗೂ ಹಿಂದುಳಿದ ಭಾಗಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.