ಕರ್ನಾಟಕ

karnataka

ETV Bharat / state

ಒಂದೆರಡು ತಿಂಗಳು ರಾಜಕೀಯವಾಗಿ ತೊಂದರೆ ಕೊಡಬಹುದು, ಇದಕ್ಕೆಲ್ಲಾ ಹೆದರಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

CM SIDDARAMAIAH
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 29, 2024, 8:33 PM IST

ಮೈಸೂರು:ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ಬಂದು ನನಗೆ ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅಂತಾರೆ. ನಾನು ಇದಕ್ಕೆಲ್ಲ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ರಾಜಕೀಯವಾಗಿ ಇದನ್ನೆಲ್ಲ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದರು.

ಅಶೋಕಪುರಂನಲ್ಲಿ ನಡೆದ ಕಾರ್ಯಕ್ರಮ (ETV Bharat)

ನಾನು ಮುಖ್ಯಮಂತ್ರಿ ಆಗಿದ್ದೇ ಅಂಬೇಡ್ಕರ್ ಅವರ ಸಂವಿಧಾನದಿಂದ. ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ 10 ಸಂಪುಟಗಳ ಭಾಷಣವನ್ನು ನಾನು ಕನ್ನಡಕ್ಕೆ ಮಾಡಿಸಿದ್ದೇನೆ. ಈ ಎಲ್ಲವನ್ನೂ ಪ್ರತಿಯೊಬ್ಬರೂ ಓದಬೇಕು ಎಂದು ಕರೆ ನೀಡಿದರು.

ದೇಶದ ಬಜೆಟ್ ಗಾತ್ರ 48 ಲಕ್ಷ ಕೋಟಿ. ಇದರಲ್ಲಿ ಅಭಿವೃದ್ಧಿಗೆ 28 ಕೋಟಿ ಖರ್ಚಾಗುತ್ತದೆ. ಇದರಲ್ಲಿ ಶೇ.24 ರಷ್ಟು ಹಣವನ್ನು ದಲಿತರ ಅಭಿವೃದ್ಧಿಗೆ ನೀಡಬೇಕಿತ್ತು. ಆದರೆ ಕೊಡುತ್ತಿರುವುದು ಕೇವಲ 60 ಸಾವಿರ ಕೋಟಿ. ಆದರೆ ನಮ್ಮ ರಾಜ್ಯದ ಅಭಿವೃದ್ಧಿ ಬಜೆಟ್ ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದ್ದೀವಿ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಭಾಗವಾಗಿ ಈ ಹಣ ಮೀಸಲು ಎಂದು ಸಿಎಂ ಹೇಳಿದರು.

ಗ್ಯಾರಂಟಿಗಳು ನಿಲ್ಲುವುದಿಲ್ಲ:ಬಜೆಟ್ ನಲ್ಲಿ 59,000 ಕೋಟಿ ಹಣವನ್ನು ಗ್ಯಾರಂಟಿಗಳ ಜಾರಿಗಾಗಿ ಮೀಸಲಿಟ್ಟಿದ್ದೇನೆ. ಇಷ್ಟೂ ಹಣ ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ವರ್ಗದವರಿಗೂ ತಲುಪುತ್ತಿದೆ. ವಿರೋಧ ಪಕ್ಷಗಳು ಎಷ್ಟೇ ಸುಳ್ಳು, ಅಪಪ್ರಚಾರ ಮಾಡಿದರೂ ಈ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳಾಗಿದ್ದು, ಈ ಬೆಳೆಗಳ ರಕ್ಷಣೆ, ವಿಸ್ತರಣೆಗೆ ಸರ್ಕಾರದಿಂದ ಕಾರ್ಯಕ್ರಮ ಘೋಷಣೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ. ಮಹದೇವಪ್ಪ, ಶಾಸಕ ಶ್ರೀವತ್ಸ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ, ಜ್ಞಾನಪ್ರಕಾಶ ಸ್ವಾಮೀಜಿ, ವಿಧಾನ‌ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಚಿವ ಸಂಪುಟದ ಮುಂದಿಟ್ಟು ಜಾತಿ ಗಣತಿ ವರದಿ ಜಾರಿಗೆ ಕ್ರಮ: ಸಿಎಂ ಸಿದ್ದರಾಮಯ್ಯ - Caste Census Report

ABOUT THE AUTHOR

...view details