ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಪತ್ನಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಪತಿ ನದಿಯಲ್ಲಿ ಶವವಾಗಿ ಪತ್ತೆ - Husband Found Dead - HUSBAND FOUND DEAD

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ಆರೋಪಿ ಶರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

HUSBAND FOUND DEAD
ಸದಾನಂದ ಭಟ್ (ETV Bharat)

By ETV Bharat Karnataka Team

Published : Sep 6, 2024, 8:36 PM IST

ಶಿವಮೊಗ್ಗ:ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ಆರೋಪಿಯ ಶವ ಶರಾವತಿ ನದಿಯಲ್ಲಿ ಪತ್ತೆಯಾಗಿದೆ. ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರುಳಿಕೊಪ್ಪದ ಸದಾನಂದ ಭಟ್ ಎಂಬವರೇ ಮೃತ ವ್ಯಕ್ತಿಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸದಾನಂದ ಭಟ್ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ಪಟಗುಪ್ಪ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿರುವ ಅನುಮಾನ ವ್ಯಕ್ತವಾಗಿದೆ. ಸುರುಳಿಕೊಪ್ಪ ಗ್ರಾಮದ ಸದಾನಂದ ಭಟ್ ಮತ್ತು ಪತ್ನಿ ಸಬೀತಾ ನಡುವೆ ಆಗ್ಗಾಗೆ ಜಗಳ ನಡೆಯುತ್ತಿತ್ತು. ಕಳೆದ ಗುರುವಾರ ಕೌಟುಂಬಿಕ ಕಾರಣಗಳಿಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸಬೀತಾ ಮೇಲೆ ಸದಾನಂದ ಭಟ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಸಬೀತಾ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದರು. ಇದರಿಂದ ಆಕೆ ಬದುಕುವುದು ಕಷ್ಟ ಎಂದು ತಿಳಿದು ಹೆದರಿದ ಸದಾನಂದ ಭಟ್ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿ ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ.

ಗಾಯಗೊಂಡ ಸಬೀತಾರನ್ನು ಅವರ ಸಂಬಂಧಿಕರು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಿ, ನಾರಾಯಣ ಹೃದಯಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರಣಾಂತಿಕ ಹಲ್ಲೆ ಹಾಗೂ ಪರಾರಿ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸದಾನಂದ ಭಟ್​ಗಾಗಿ ಶೋಧ ನಡೆಸಿದ್ದರು. ಆದರೆ, ಆರೋಪಿಯ ಕಾರು ಹೊಸನಗರ ಪಟ್ಟಣದ ಪಟಗುಪ್ಪ ಸೇತುವೆ ಬಳಿ ದೊರಕಿತ್ತು. ಸದಾನಂದ ಭಟ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಕಾರನ್ನು ಹೊಸನಗರ ಪೊಲೀಸರು ವಶಪಡಿಸಿಕೊಂಡಿದ್ದರು.

ಶುಕ್ರವಾರ ಸದಾನಂದ ಭಟ್ ಮೃತದೇಹ ಪಟಗುಪ್ಪ ಸೇತುವೆ ಬಳಿ ಪತ್ತೆಯಾಗಿದೆ. ಶವವನ್ನು ಮೇಲಕ್ಕೆ ತೆಗೆದು ಹೊಸನಗರ ಸರ್ಕಾರಿ‌ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಕುರಿತು ರಿಪ್ಪನ್‌ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ:ಹುಬ್ಬಳ್ಳಿ: ಬ್ಯಾಂಕ್ ದರೋಡೆಗೆ ಯತ್ನಿಸಿದ 5 ಗಂಟೆಯೊಳಗೆ ಆರೋಪಿ ಬಂಧಿಸಿದ ಪೊಲೀಸರು - Accused arrested

ABOUT THE AUTHOR

...view details