ಶಿವಮೊಗ್ಗ:ತನ್ನ ಪತ್ನಿ ಜೊತೆ ಎದುರು ಮನೆಯ ಯುವಕ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಪತಿಯೊಬ್ಬ ಇಬ್ಬರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಸಾಗರ ಪಟ್ಟಣದ ಬೆಳಲಮಕ್ಕಿಯಲ್ಲಿ ನಡೆದಿದೆ. ನವೀನ್ (29) ಹಾಗೂ ಧರೇಶ್ (21) ಹಲ್ಲೆಗೊಳಗಾದ ಯುವಕರು. ರವಿ ಎಂಬಾತ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಘಟನೆ ವಿವರ:ಸಾಗರ ಪಟ್ಟಣದ ಬೆಳಮಕ್ಕಿ ಬಡಾವಣೆಯಲ್ಲಿ ತನ್ನ ಪತ್ನಿ ಜೊತೆ ರವಿ ವಾಸವಾಗಿದ್ದು, ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇವರ ಎದುರು ಮನೆಯಲ್ಲಿ ನವೀನ್ ಇದ್ದ. ಈ ನಡುವೆ, ತನ್ನ ಪತ್ನಿ ಜೊತೆ ನವೀನ್ ಸಲುಗೆಯಿಂದ ಮಾತನಾಡುವುದನ್ನು ರವಿ ಕಂಡಿದ್ದ. ಈ ರೀತಿ ಮುಂದೆ ಆಗಬಾರದು ಎಂದು ಎಚ್ಚರಿಕೆ ನೀಡಿದ್ದನಂತೆ.
ಆದರೂ ಸಹ ಇಬ್ಬರ ನಡುವೆ ಮಾತುಕತೆ ಮುಂದುವರೆದಿದ್ದು, ಇದನ್ನು ನೋಡಿದ ರವಿ ಗಲಾಟೆ ಮಾಡಿದ್ದಾನೆ. ಈ ವೇಳೆ ನವೀನ್ ಕಾರು ಹಾಗೂ ಮನೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾನೆ. ನಂತರ ಚಾಕುವಿನಿಂದ ನವೀನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆತನ ಕೈ ಸೇರಿದಂತೆ ಹೊಟ್ಟೆ, ಬೆನ್ನಿಗೆ ಗಾಯಗಳಾಗಿವೆ. ಅಲ್ಲದೇ, ಹಲ್ಲೆ ತಡೆಯಲು ಮುಂದಾದ ನವೀನ್ನ ಸ್ನೇಹಿತ ಧರೇಶ್ ಎಂಬುವರ ಮೇಲೆಯೂ ರವಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.