ಉಡುಪಿ:ಕಳೆದೊಂದು ವಾರದಿಂದಕಲುಷಿತ ನೀರು ಕುಡಿದು 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ.
ಕುಡಿಯುವ ನೀರು ಕಲುಷಿತಗೊಂಡಿದ್ದು, ಇಲ್ಲಿನ ಕಾಸಿನಾಡಿ ಎಂಬಲ್ಲಿರುವ ಟ್ಯಾಂಕ್ನಿಂದ ಬಿಡಲಾಗುವ ನೀರು ಕುಡಿದು ಕರ್ಕಿಕಳ್ಳಿ ಮತ್ತು ಮಡಿಕಲ್ ಗ್ರಾಮದ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ವಾರ್ಡ್ನ ಪ್ರತಿ ಮನೆಯಲ್ಲೂ 3ಕ್ಕೂ ಅಧಿಕ ಮಂದಿಯಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. 80 ವರ್ಷದ ವಯೋವೃದ್ಧರಿಗೆ ರಕ್ತಭೇದಿ ಉಂಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕು ಸರ್ವೇಕ್ಷಣಾ ಅಧಿಕಾರಿ ನಾಗರತ್ನ (ETV Bharat) ತಾಲೂಕು ಸರ್ವೇಕ್ಷಣಾ ಅಧಿಕಾರಿ ನಾಗರತ್ನ ಪ್ರತಿಕ್ರಿಯಿಸಿ, ''ಕರ್ಕಿ ಕಳ್ಳಿ ಮತ್ತು ಮಡಿಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಹಲವರು ಅಸ್ವಸ್ಥಗೊಂಡಿದ್ದು, ಸಮುದಾಯ ಕೇಂದ್ರ ಹಾಗೂ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಿತು. ತಕ್ಷಣ ನಮ್ಮ 'ಶೀಘ್ರ ಪತ್ತೆ ಹಚ್ಚುವ ತಂಡ' (Rapid Response Team)ವು ಬೈಂದೂರು ವೈದ್ಯಾಧಿಕಾರಿಗಳ ಸಹಿತ ಆ ಗ್ರಾಮಕ್ಕೆ ಭೇಟಿ ನೀಡಿದಲ್ಲದೇ ಪ್ರತಿ ಮನೆಯ ಸದಸ್ಯರ ಆರೋಗ್ಯ ತಪಾಸಣೆ ನಡೆಸಿತು. ಮಾಹಿತಿ ಪ್ರಕಾರ 27ರಂದು ಮೊದಲ ಪ್ರಕರಣ ಕಾಣಿಸಿಕೊಂಡಿತು. ಆ ನಂತರ 28ರಂದು 15 ಪ್ರಕರಣಗಳು, 29ಕ್ಕೆ 59 ಕೇಸ್, 1ರಂದು 24, 2ರಂದು 15, 3ರಂದು 23 ಜನ ಅಸ್ವಸ್ಥಗೊಂಡ ಪ್ರಕರಣಗಳು ಕಂಡು ಬಂದವು. ಒಟ್ಟು 100ರಿಂದ 143 ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅದೃಷ್ಟ ಎಂಬಂತೆ ಇಲ್ಲಿ ಯಾವುದೇ ಕಾಲರಾ ಕೇಸ್ ಕಂಡು ಬಂದಿಲ್ಲ. ಒಂದೋ-ಎರಡೋ ಕೇಸ್ ಬಿಟ್ಟರೆ ಯಾವುದೇ ಗಂಭೀರ ರೀತಿಯ ಪ್ರಕರಣ ಪತ್ತೆಯಾಗಿಲ್ಲ. ಕೆಲವರಲ್ಲಿ ಮಾತ್ರ ವಾಂತಿ ಭೇದಿ ಕಂಡು ಬಂದಿದ್ದು, ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ರೋಗಿಗಳ ಪರೀಕ್ಷೆ ಹಾಗೂ ನೀರಿನ ಪ್ರದೇಶ ಪರಿಶೀಸಲಾಗಿದೆ'' ಎಂದಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ, ಪಿಡಿಒ ಅಮಾನತು - PDO Suspend