ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಟೆಕ್ಕಿ 24 ಗಂಟೆ ಡಿಜಿಟಲ್‌ ಅರೆಸ್ಟ್: ₹ 81 ಲಕ್ಷ ದೋಚಿದ ವಂಚಕರು!

ಹುಬ್ಬಳ್ಳಿ ನಗರದ ಸಾಫ್ಟ್‌ವೇರ್‌ ಇಂಜಿನಿಯರ್​ವೊಬ್ಬರು ಸೈಬರ್​ ವಂಚಕರ ಡಿಜಿಟಲ್‌ ಅರೆಸ್ಟ್ ಬಲೆಗೆ ಸಿಲುಕಿ 81 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆ
ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆ (ETV Bharat)

By ETV Bharat Karnataka Team

Published : 5 hours ago

ಹುಬ್ಬಳ್ಳಿ:ಇತ್ತೀಚಿಗೆಹೈದರಾಬಾದ್‌ನಲ್ಲಿ ಟೆಕ್ಕಿಯೊಬ್ಬರು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ 30 ಗಂಟೆ ಲಾಡ್ಜ್​ನಲ್ಲಿ ಡಿಜಿಟಲ್‌ ಅರೆಸ್ಟ್​ ಆಗಿದ್ದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಇಂತಹದ್ದೇ ಪ್ರಕರಣವೊಂದು ವಾಣಿಜ್ಯ ನಗರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರಿಗೆ ವಂಚಕರು, ನಿಮ್ಮ ಹೆಸರಲ್ಲಿ ಪಾರ್ಸಲ್‌ ಮುಂಬೈನಿಂದ ತೈವಾನ್‌ಗೆ ರವಾನೆ ಆಗುತ್ತಿದೆ. ಅದರಲ್ಲಿ ಕಾನೂನುಬಾಹಿರ ವಸ್ತುಗಳಿವೆ. ಸೈಬರ್‌ ಕ್ರೈಂ ಬ್ರ್ಯಾಂಚ್‌ನವರು ಮಾತನಾಡುತ್ತಾರೆಂದು ಹೇಳಿ ಕರೆ ವರ್ಗಾಯಿಸಿದ್ದಾರೆ. ನಂತರ ವಿಡಿಯೋ ಕರೆ ಮೂಲಕ ಮಾತನಾಡಿ, ನಿಮ್ಮ ಹೆಸರಿನ ಆಧಾರ್​ ಕಾರ್ಡ್‌ಗೆ ಲಿಂಕ್‌ ಆಗಿರುವ 24 ಖಾತೆಗಳು ಆರೋಪಿತನೊಂದಿಗೆ ಲಿಂಕ್‌ ಇವೆ.

ನಿಮ್ಮನ್ನು ಡಿಜಿಟಲ್‌ ಆಗಿ ಬಂಧಿಸಬೇಕಾಗಿದ್ದು, ನಿಮ್ಮ ಬ್ಯಾಂಕ್‌ ಖಾತೆಗಳ ಪರಿಶೀಲನೆ ಇದೆ ಎಂದು ಹೆದರಿಸಿ ಅ.21ರಂದು ಬೆಳಗ್ಗೆಯಿಂದ 22ರ ಸಂಜೆವರೆಗೆ ಮನೆಯಲ್ಲಿ ಡಿಜಿಟಲ್‌ ಅರೆಸ್ಟ್‌ ಮಾಡುವ ಮೂಲಕ ಒಂದು ದಿನ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ತಮ್ಮ ವಿವಿಧ ಬ್ಯಾಂಕ್‌ ಖಾತೆಗಳಿಗೆ ಆನ್​ಲೈನ್‌ ಮೂಲಕ ಒಟ್ಟು 81,06,286 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಇದಕ್ಕೂ ಮೊದಲು ವಂಚಕರು ಟೆಕ್ಕಿಗೆ ವಿಡಿಯೋ ಕಾಲ್‌ ಮಾಡಿದ್ದಾಗ ಮನೆಯಲ್ಲಿನ ಯಾರೊಂದಿಗೂ ಸಂಪರ್ಕ ಹೊಂದಬಾರದು. ರೂಮ್‌ ಬಿಟ್ಟು ಎಲ್ಲೂ ಹೋಗಬಾರದು. ಹೊರಗಿನಿಂದ ಒಳಗೆ ಯಾರು ಬರದಂತೆ ಭದ್ರಪಡಿಸಿಕೊಳ್ಳಬೇಕು. ಇಲ್ಲವಾದರೆ ನಾವು ಬಂಧಿಸುತ್ತೇವೆಂದು ರೂಮ್‌ನಲ್ಲೇ ನಿರ್ಬಂಧಿಸಿದ್ದರು.

ವಂಚನೆ ಹೇಗೆ?:ಪಾರ್ಸೆಲ್‌, ಕೊರಿಯರ್‌ ಕಂಪನಿಗಳ ಸೋಗಿನಲ್ಲಿ ಕರೆಯೊಂದು ಬರಲಿದೆ. ನಿಮ್ಮ ಹೆಸರಲ್ಲಿ ಯಾರೋ ಪಾರ್ಸೆಲ್‌ ಕಳುಹಿಸಿದ್ದಾರೆ ಅಥವಾ ನಿಮ್ಮ ಹೆಸರಿನಿಂದ ಥಾಯ್ಲೆಂಡ್‌, ತೈವಾನ್‌, ಮಲೇಷಿಯಾಗೆ ಪಾರ್ಸಲ್‌ ಕಳುಹಿಸಲಾಗಿದೆ. ಅದರಲ್ಲಿ ಮಾದಕ ವಸ್ತು, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಇನ್ನಿತರ ವಸ್ತುಗಳಿವೆ. ಡ್ರಗ್ಸ್‌ ಜಾಲ ನಿಮ್ಮ ಹೆಸರಿನಲ್ಲಿ ಈ ಕೃತ್ಯವೆಸಗಿದೆ. ಈ ಕುರಿತು ನೀವು ದೂರು ದಾಖಲಿಸಿ ಅಥವಾ ನಿಮಗೆ ನಾರ್ಕೋಟಿಕ್ಸ್‌ ವಿಭಾಗದ ಅಧಿಕಾರಿಗಳು ಕರೆ ಮಾಡುತ್ತಾರೆಂಬ ಸಂದೇಶ ನೀಡುತ್ತಾರೆ. ನಂತರ ಸೈಬರ್‌ ಕ್ರೈಂ ಪೊಲೀಸರು, ಸಿಐಡಿ, ಸಿಸಿಬಿ ಸೇರಿದಂತೆ ಇತರೆ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮೂಲಕ ವಿಚಾರಣೆ ನಡೆಸುತ್ತಾರೆ.

ಆಧಾರ್‌ನಲ್ಲಿರುವ ಅಥವಾ ಸರ್ಕಾರಿ ದಾಖಲೆಯಲ್ಲಿರುವ ಗುರುತು ಪತ್ತೆಗೆ ವಿವಸ್ತ್ರಗೊಳಿಸುತ್ತಾರೆ. ಈ ಪ್ರಕರಣದಿಂದ ಪಾರಾಗಲು, ಬಂಧನವಾಗದಂತಿರಲು ಇಂತಿಷ್ಟು ಹಣ ನೀಡಬೇಕೆಂದು ಹೇಳುತ್ತಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗುವಂತೆ ಮಾಡುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳೇನು?:

  • ಅನಾಮಧೇಯ ಸಂಖ್ಯೆಯಿಂದ ವಿಡಿಯೋ ಕಾಲ್, ಕರೆಗಳು ಬಂದರೆ ಸ್ವೀಕರಿಸಬಾರದು.
  • ಅನಾಮಧೇಯ, ಅನುಮಾನಾಸ್ಪದ ಲಿಂಕ್​ಗಳು ಬಂದರೆ ಕ್ಲಿಕ್ ಮಾಡಬಾರದು.
  • ಸಂದೇಹ ಬಂದರೆ ತಕ್ಷಣ ಕರೆ ಕಡಿತಗೊಳಿಸಿ ಬ್ಲಾಕ್ ಮಾಡಬೇಕು.
  • ಸಮೀಪದ ಠಾಣೆಗೆ ತೆರಳಿ ಮಾಹಿತಿ ಕೊಡಬೇಕು.
  • 1930 ಸಂಖ್ಯೆಗೆ ಕರೆ ಮಾಡಿ ವರದಿ ನೀಡಬೇಕು.
  • ಒಂದು ವೇಳೆ ಹಣಕಾಸಿನ ವ್ಯವಹಾರ ಆಗಿದ್ದರೆ ನ್ಯಾಷನಲ್ ಸೈಬರ್ ಕೈಂ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಸಿಆರ್‌ಪಿ)ಗೆ ತಿಳಿಸಬೇಕು
  • ಬ್ಯಾಂಕ್​ ಖಾತೆ ಬ್ಲಾಕ್ ಮಾಡಿ, ವಹಿವಾಟು ಫ್ರೀಜ್ ಮಾಡಿಸಬೇಕು

ಡಿಜಿಟಲ್ ಅರೆಸ್ಟ್ ಎಂಬದೇ ಇಲ್ಲ:"ಭಾರತ ಸೇರಿದಂತೆ ಜಗತ್ತಿನ ಯಾವುದೇ ಕಾನೂನು ವ್ಯವಸ್ಥೆಯಲ್ಲಿ ಡಿಜಿಟಲ್‌ ಅರೆಸ್ಟ್‌ ಎಂಬುದಿಲ್ಲ. ಸೈಬರ್‌ ಅಪರಾಧಿಗಳೇ ಇದನ್ನು ಸೃಷ್ಟಿಸಿದ್ದಾರೆ. ಸಿಬಿಐ, ಇ.ಡಿ, ಕಸ್ಟಮ್ಸ್‌, ಸೈಬರ್‌ ಪೊಲೀಸರು ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್‌ ಅರೆಸ್ಟ್‌ ಆಗಿದ್ದೀರಿ. ನೀವು ಇದ್ದಲ್ಲಿಯೇ ಇರಬೇಕು. ಎಲ್ಲೂ ಹೋಗಬಾರದು ಎಂದು ಯಾವತ್ತೂ ಹೇಳಲ್ಲ. ಹಾಗೇನಾದರು ಯಾರಾದರೂ ಹೇಳಿದರೆ ಅದು ಕಾನೂನುಬಾಹಿರವಾಗಿದೆ. ಇಂತಹ ಬೆದರಿಕೆ‌ಯ ಕರೆಗಳಿಗೆ ಯಾರು ಭಯಪಡುವ ಅವಶ್ಯಕತೆ ಇಲ್ಲ" ಎಂದು ಹು-ಧಾ ಸಿಇಎನ್ ಕೈಂ ಪೊಲೀಸ್ ಠಾಣೆ ವಿಭಾಗದ ಎಸಿಪಿ ಡಾ. ಶಿವರಾಜ್ ಕಟಕಭಾವಿ ಅವರು 'ಈಟಿವಿ ಭಾರತ'ಕ್ಕೆ ಮಾಹಿತಿ‌ ನೀಡಿದ್ದಾರೆ.

ಇದನ್ನೂ ಓದಿ:ಆ ಮೂರು ದೇಶಗಳಿಂದ 'ಡಿಜಿಟಲ್​​ ಅರೆಸ್ಟ್​' ವಂಚನೆ: ₹120 ಕೋಟಿ ಕಳೆದುಕೊಂಡ ಭಾರತೀಯರು

ABOUT THE AUTHOR

...view details