ಹುಬ್ಬಳ್ಳಿ:ಪ್ರಾಣಿ, ಪಕ್ಷಿಗಳಿಗೂ ಕೂಡ ಮಾನವನಂತೆ ಬಾಳಿ ಬದುಕುವ ಹಕ್ಕಿದೆ. ಆದರೆ ಕೆಲ ಕಾರಣ ಹಾಗೂ ಸಂದರ್ಭದಲ್ಲಿ ಸಾಕು ಪ್ರಾಣಿಗಳು, ಬೀದಿನಾಯಿಗಳು ಪಕ್ಷಿಗಳು ಅವಘಡಕ್ಕೆ ಸಿಲುಕಿ ನರಳಾಡುತ್ತವೆ. ಇಂತಹ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಹುಬ್ಬಳ್ಳಿಯ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ ಟೊಂಕ ಕಟ್ಟಿ ನಿಂತಿದೆ. ಕಳೆದ ಎಂಟು ವರ್ಷಗಳಿಂದ ನಾಯಿ, ಬೆಕ್ಕು, ಕುದುರೆ, ಆಕಳು, ಎಮ್ಮೆ, ಹದ್ದು, ಪಾರಿವಾಳ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳ ಜೀವ ಉಳಿಸಿದೆ ಈ ಸಂಸ್ಥೆ.
ಬೀದಿನಾಯಿಯೆಂದರೆ ಕಚ್ಚುತ್ತದೆ, ಗಲೀಜು ಎಂದು ಜನರು ದೂರ ಹೋಗುತ್ತಾರೆ. ಆದರೆ ಬೀದಿನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವುಗಳನ್ನು ರಕ್ಷಿಸುವ ಕಾಯಕವನ್ನು ಮಾಡಲಾಗುತ್ತಿದೆ. ನಗರದ ಸಮಾನ ಮನಸ್ಕ ಉದ್ಯಮಿಗಳು, ವ್ಯಾಪಾರಿಗಳು, ಪ್ರಾಣಿಪ್ರಿಯರು ಈ ತಂಡ ಕಟ್ಟಿಕೊಂಡು ನಾಯಿ ಸೇರಿದಂತೆ ಪಶು, ಪಕ್ಷಿಗಳ ರಕ್ಷಣೆಗೆ ನಿಂತಿದ್ದಾರೆ.
ಸದ್ದಿಲ್ಲದೆ ಮೂಕಜೀವಿಗಳ ರಕ್ಷಣೆಗೆ ನಿಂತ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ (ETV Bharat) ಹುಬ್ಬಳ್ಳಿ ಹೊರವಲಯದ ಪಾಳೆ ಗ್ರಾಮದ ಬಳಿ ಎರಡು ಎಕರೆ ವಿಶಾಲ ಜಾಗದಲ್ಲಿ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ ಇದೆ. ತೇಜರಾಜ್ ಜೈನ್ ಹಾಗೂ ವಿಕ್ಕಿ ರಾಜ್ ಸಿಂಗ್ ಸೇರಿದಂತೆ 120ಕ್ಕೂ ಹೆಚ್ಚು ಜನರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಸದಸ್ಯರ ತಂಡ ತಾವು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ಇದ್ದರೂ ಕೂಡ ಸಮಯ ಹೊಂದಿಸಿಕೊಂಡು, ವೈದ್ಯರು, ಆಂಬ್ಯುಲೆನ್ಸ್ ಹಾಗೂ ಎಂಟು ಜನ ಸಿಬ್ಬಂದಿ ಇಟ್ಟುಕೊಂಡು ಬೀದಿನಾಯಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ತಮ್ಮ ಶೆಲ್ಟರ್ಲ್ಲಿ ರಕ್ಷಣೆ ನೀಡುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಅವುಗಳ ಮೂಲ ಸ್ಥಳಕ್ಕೆ ಬಿಟ್ಟುಬರುತ್ತಾರೆ.
ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಸದಸ್ಯರು (ETV Bharat) ಕಳೆದ ಎಂಟು ವರ್ಷಗಳಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ನಾಯಿಗಳು ಹಾಗೂ ಪ್ರಾಣಿ ಪಕ್ಷಿಗಳ ಆರೈಕೆ ಮಾಡಿದ್ದಾರೆ. ಅನಾರೋಗ್ಯದಿಂದ ನರಳುವ ಬೀದಿನಾಯಿಗಳಿಗಾಗಿಯೇ ಶೆಲ್ಟರ್ ನಿರ್ಮಿಸಲಾಗಿದೆ.
ಅಧ್ಯಕ್ಷ ತೇಜಾರಾಜ್ ಜೈನ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಮನೇಕಾ ಗಾಂಧಿಯವರಿಂದ ಪ್ರೇರಣೆ ಪಡೆದು ಹುಬ್ಬಳ್ಳಿಯಲ್ಲೂ ಸಂಸ್ಥೆ ಮಾಡಬೇಕು ಎಂದ ನಿರ್ಧಾರದಿಂದ ಎಂಟು ವರ್ಷಗಳ ಹಿಂದೆ ಸಂಸ್ಥೆಯನ್ನು ಪ್ರಾರಂಭಿಸಿದೆವು. ಸಾಮಾನ್ಯವಾಗಿ ಪ್ರಾಣಿಗಳಿಗೆ ಅಪಘಾತವಾದಾಗ ಅವುಗಳ ರಕ್ಷಣೆ, ಆರೈಕೆ ಮಾಡುವವರಿರುವುದಿಲ್ಲ. ಬಿಸ್ಕಟ್, ರೊಟ್ಟಿ ಕೊಟ್ಟು ಅದನ್ನೇ ಸೇವೆ ಅಂತ ಹೋಗುವವರೇ ಹೆಚ್ಚು. ಹೀಗಾಗಿ ಒಂದು ತಂಡ ಕಟ್ಟಿಕೊಂಡಿದ್ದೇವೆ. 120 ಜನರಲ್ಲಿ 80 ಜನ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ನಗರದ ಯಾವುದೇ ಏರಿಯಾದಲ್ಲಿ ಅಪಘಾತವಾದರೂ, ನಮಗೆ ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ 10-15 ನಿಮಿಷದಲ್ಲಿ ಸ್ಥಳಕ್ಕೆ ತೆರಳಿ ವಿಡಿಯೋ ತೆಗೆದುಕೊಂಡು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತದೆ. ಅದಾದ ನಂತರ ಗಂಭೀರವಾದ ಗಾಯಗಳಾಗಿದ್ದರೆ ಎರಡು ಮೂರು ತಿಂಗಳವರೆಗೂ ಅಂತಹ ನಾಯಿಗಳನ್ನು ಶೆಲ್ಟರಲ್ಲಿ ಇಟ್ಟುಕೊಂಡು ಔಷಧೋಪಚಾರ ಮಾಡಲಾಗುತ್ತದೆ" ಎಂದು ತಿಳಿಸಿದರು.
ಪ್ರಾಣಿಗಳ ಜೊತೆಗೆ ಸಂಸ್ಥೆಯ ಸದಸ್ಯರು (ETV Bharat) "ಇಲ್ಲಿಯವರೆಗೂ ಸರಿಸುಮಾರು 4 ಸಾವಿರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಏಳರಿಂದ 8 ಸಾವಿರ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿದಿನ ನಾಲ್ಕೈದು ಇಂತಹ ಪ್ರಕರಣಗಳು ಬರುತ್ತವೆ. ಪ್ರತಿ ನಾಯಿ ಅಥವಾ ದನಕರುಗಳ ಬಗ್ಗೆ ಸಂಪೂರ್ಣವಾದ ದಾಖಲಾತಿಗಳನ್ನು ನಮೂದಿಸಲಾಗುತ್ತದೆ. ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ರಕ್ಷಣೆ ಮಾಡಲಾಗಿದೆ. ಯಾವ ಔಷದೋಪಚಾರ ನೀಡಲಾಗಿದೆ ಎಂಬ ದಾಖಲೆ ಇಟ್ಟುಕೊಳ್ಳಲಾಗುತ್ತದೆ. ಅತ್ಯಾಧುನಿಕ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಸುಮಾರು 50-55 ಲಕ್ಷ ಖರ್ಚು ಮಾಡಲಾಗಿದೆ" ಎಂದರು.
ಪ್ರತ್ಯೇಕ ಚಿತಾಗಾರ, ಉತ್ತರ ಕರ್ನಾಟಕದಲ್ಲೆ ಪ್ರಥಮ: ಮೃತ ಪ್ರಾಣಿಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಘಟಕ ಸ್ಥಾಪನೆ ಮಾಡಲಾಗಿದೆ. ಅನಾರೋಗ್ಯ, ಗಂಭೀರವಾದ ಗಾಯ, ವಯೋಸಹಜ ಕಾಯಿಲೆಗಳಿಂದ ನಾಯಿಗಳು ಸಾವನ್ನಪ್ಪುತ್ತವೆ. ಅವುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ದೃಷ್ಟಿಯಿಂದ ಅವುಗಳಿಗೆ ಗೌರವ ಕೊಡುವ ಸಲುವಾಗಿ ಇಲ್ಲಿ ಪ್ರತ್ಯೇಕ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳು ಸತ್ತ ಮೇಲೆ ಅಂತಿಮ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ದಾನಿಗಳಾದ ಸುಧಾಮೂರ್ತಿ ಸೇರಿದಂತೆ ಇತರೆ ದಾನಿಗಳ ಸಹಾಯದಿಂದ ನಾಲ್ಕೈದು ಲಕ್ಷ ಖರ್ಚಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಇಲ್ಲಿ ಈಗಾಗಲೇ 15-20 ನಾಯಿಗಳ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
ಪ್ರಾಣಿಗಳ ಜೊತೆಗೆ ಸಂಸ್ಥೆಯ ಸದಸ್ಯರು (ETV Bharat) ಸಂಸ್ಥೆ ಕಾರ್ಯದರ್ಶಿ ವಿಕ್ಕಿರಾಜ್ ಸಿಂಗ್ ಕಪೂರ್ ಮಾತನಾಡಿ, "ಇಲ್ಲಿಗೆ ಬರುವ ಪ್ರತಿ ಪ್ರಾಣಿ ಪಕ್ಷಿಗಳಿಗೂ ನಮ್ಮ ಕುಟುಂಬ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕಳೆದ 8 ವರ್ಷಗಳಿಂದ ಈ ಸೇವೆ ಮುಂದುವರೆಸಿದ್ದೇವೆ. ಇಲ್ಲಿ ಶುದ್ಧವಾದ ಸಸ್ಯಾಹಾರ ನೀಡಲಾಗುತ್ತದೆ. ಯಾವುದೇ ಮಾಂಸಾಹಾರವನ್ನು ಯಾವುದೇ ಪ್ರಾಣಿಗಳಿಗೆ ನೀಡುವುದಿಲ್ಲ. ಪ್ರತಿದಿನ ನಾಲ್ಕೈದು ನಾಯಿಗಳನ್ನು ರಕ್ಷಣೆ ಮಾಡಲಾಗುತ್ತದೆ. ಒಮೊಮ್ಮೆ ಹೆಚ್ಚು ಆಗುತ್ತದೆ. ತುರ್ತು ಸಂದರ್ಭಗಳಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿರುವ ನಾಯಿಗಳನ್ನು ಸಂಪೂರ್ಣವಾಗಿ ಆರೋಗ್ಯವಾಗುವವರೆಗೂ ಆರೈಕೆ ಮಾಡಲಾಗುತ್ತದೆ. ಮತ್ತೆ ಯಾವ ಜಾಗದಿಂದ ರಕ್ಷಣೆ ಮಾಡಲಾಗಿತ್ತೋ ಅದೇ ಜಾಗಕ್ಕೆ ಹೋಗಿ ಬಿಟ್ಟು ಬರಲಾಗುತ್ತದೆ." ಎಂದು ಹೇಳಿದರು.
ಪ್ರಾಣಿಗಳ ಜೊತೆಗೆ ಸಂಸ್ಥೆಯ ಸದಸ್ಯರು (ETV Bharat) "ಅಪಘಾತವಾದ ಪ್ರಕರಣಗಳು ಹೆಚ್ಚಿವೆ. ಅದರ ಜೊತೆಗೆ ಕೆಲವರು ನಾಯಿಗಳನ್ನು ಖರೀದಿಸಿ ನಂತರ ಅವುಗಳ ಪಾಲನೆ ಪೋಷಣೆ ಮಾಡಲಾಗದೆ ರಸ್ತೆಯಲ್ಲಿ ಬಿಟ್ಟು ಬಿಡುತ್ತಾರೆ. ಅಂತವುಗಳು ಹೊರಗಿನ ಪರಿಸರಕ್ಕೆ ಹೊಂದಲಾಗದೆ ಅಪಘಾತವಾಗೊಳ್ಳುತ್ತವೆ. ಅವುಗಳನ್ನು ರಕ್ಷಣೆ ಮಾಡಿ ನಂತರ ಪ್ರಾಣಿ ಪ್ರಿಯರಿಗೆ ದತ್ತು ಕೊಡುವ ಕೆಲಸವನ್ನು ಮಾಡಲಾಗುತ್ತದೆ"ಎಂದು ತಿಳಿಸಿದರು.
ಆಂಬ್ಯುಲೆನ್ಸ್ ಚಾಲಕ ವಿಜಯ್ ಪ್ರತಿಕ್ರಿಯಿಸಿ, "ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕೆಲಸ ಮಾಡುತ್ತೇವೆ. ಕೆಲವೊಮ್ಮೆ ರಾತ್ರಿ 9 ಗಂಟೆವರೆಗೂ ನಾಯಿಗಳನ್ನು ರಕ್ಷಣೆ ಮಾಡಿದ್ದೇವೆ. ಕರೆ ಮಾಡಿ ಸ್ಥಳೀಯರು ಕೊಟ್ಟ ವಿಳಾಸಕ್ಕೆ ತೆರಳಿ ಪ್ರಥಮ ಚಿಕಿತ್ಸೆ ನೀಡಿ ಸಣ್ಣಪುಟ್ಟ ಚಿಕಿತ್ಸೆ ಅಲ್ಲೇ ಕೊಟ್ಟು ಬರುತ್ತೇವೆ. ಗಂಭೀರವಾದ ಪ್ರಕಣಗಳಿದ್ದರೆ ಶೆಲ್ಟರ್ಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಸದಸ್ಯರು (ETV Bharat) ಸಾರ್ವಜನಿಕರು ಏನು ಮಾಡಬೇಕು: ಜನರು ನೇರವಾಗಿ ಸಂಸ್ಥೆಯ ಅಧಿಕೃತವಾದ 9141034818 ನಂಬರ್ಗೆ ಕರೆ ಮಾಡಿ ಮಾಹಿತಿ ಜೊತೆಗೆ ಚಿಕ್ಕ ವಿಡಿಯೋ ಕಳುಹಿಸಿದರೆ ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುತ್ತಾರೆ.
ಇದನ್ನೂ ಓದಿ:14 ವರ್ಷಗಳ ಬಳಿಕ ಮನೆ ಸೇರಿದ ವ್ಯಕ್ತಿ: ಇದು ಮಂಗಳೂರಿನ ಸಂಸ್ಥೆಯ 450ನೇ ಪುನರ್ಮಿಲನ