ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು, 6ಕ್ಕೇರಿದ ಸಾವಿನ ಸಂಖ್ಯೆ - HUBBALLI CYLINDER BLAST CASE

ಗ್ಯಾಸ್​ ಸಿಲಿಂಡರ್​ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪ ಮಾಲಾಧಾರಿಗಳಲ್ಲಿ ಆರು ಜನ ಸಾವನ್ನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

The deceased Shankar Chavan And Manjunatha Wagmode
ಮೃತ ಶಂಕರ ಚವ್ಹಾಣ್ ಹಾಗೂ ಮಂಜುನಾಥ ವಾಗ್ಮೋಡೆ (ETV Bharat)

By ETV Bharat Karnataka Team

Published : Dec 29, 2024, 9:59 AM IST

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಇಂದು ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಶಂಕರ ಚವ್ಹಾಣ್ (29) ಹಾಗೂ ಮಂಜುನಾಥ ವಾಗ್ಮೋಡೆ (22 ) ಮೃತ ಮಾಲಾಧಾರಿಗಳು.

ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಇವರು ಅಯ್ಯಪ್ಪನ ವೃತ ಮಾಡಲು ಮೊದಲ ಬಾರಿಗೆ ಮಾಲೆ ಹಾಕಿದ್ದರು. ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಏಳು ದಿನಗಳಿಂದ ಕೆಎಂಸಿಆಎರ್​ಐನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಮೃತ ಮಂಜುನಾಥ ಎರಡನೇ ವರ್ಷ ಡಿಪ್ಲೊಮಾ ಓದುತ್ತಿದ್ದರು. ಎರಡನೇ ವರ್ಷ ಅಯ್ಯಪ್ಪ ವೃತ ಮಾಡಲು ಮಾಲೆ ಹಾಕಿದ್ದರು. ಇವತ್ತು ‌ಒಂದೇ ದಿನ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ‌. ತಡರಾತ್ರಿ ಶಂಕರ ಚವ್ಹಾಣ್ ಮೃತಪಟ್ಟರೆ, ಬೆಳಗ್ಗೆ ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದಾರೆ. ಗಾಯಗೊಂಡ 9 ಜನರಲ್ಲಿ ಸದ್ಯಕ್ಕೆ ಐವರು ಮೃತಪಟ್ಟಿದ್ದಾರೆ. ಇನ್ನುಳಿದ ಮೂರು ಜನರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ಓರ್ವರಲ್ಲಿ ಚೇತರಿಕೆ ಕಂಡು ಬಂದಿದೆ.

ಪ್ರಕರಣದ ಹಿನ್ನೆಲೆ:ಡಿಸೆಂಬರ್​ 23ರಂದು ಬೆಳಗ್ಗಿನ ಜಾವ ಹುಬ್ಬಳ್ಳಿಯ ಉಣಕಲ್​ ಅಚ್ಚವ್ವ ಕಾಲೊನಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ ಸಂಭವಿಸಿತ್ತು. ಎಂದಿನಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ವ್ರತವನ್ನು ಮುಗಿಸಿ, ಅಯ್ಯಪ್ಪನಿಗೆ ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್​ಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗಿದೆ. ದೇವರಿಗೆ ಹಚ್ಚಿದ್ದ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳು ತಕ್ಷಣವೇ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.

ಆದರೆ ಡಿ.26 ರಂದು ಮುಂಜಾನೆ ನಿಜಲಿಂಗಪ್ಪ ಬೇಪುರಿ (58), ಹಾಗೂ ಸಂಜಯ ಸವದತ್ತಿ (20) ಎನ್ನುವ ಇಬ್ಬರು ಮಾಲಾಧಾರಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಬಳಿಕ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳಾದ ರಾಜು ಮೂಗೇರಿ (21) ಹಾಗೂ ಲಿಂಗರಾಜು ಬೀರನೂರ(24) ಕೂಡ ಚಿಕಿತ್ಸೆಗೆ ಸ್ಪಂದಿಸದೇ ಡಿ. 27ರಂದು ಕೊನೆಯುಸಿರೆಳೆದಿದ್ದರು. ಇದೀಗ ಉಳಿದ ಐವರಲ್ಲಿ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಪ್ರಕಾಶ್ ಬಾರಕೇರ್ (42) ಮತ್ತು ತೇಜಸ್ವರ್ ಸಾತರೆ (26) ಸ್ಥಿತಿ ಚಿಂತಾಜನಕವಾಗಿದೆ. ವಿನಾಯಕ್ ಭಾರಕೇರ್ (12) ಚಿಕಿತ್ಸೆ‌ ಪಡೆಯುತ್ತಿದ್ದಾರೆ. ವಿನಾಯಕ್ ಬಾರಕೇರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಲಕ್ಷ ರೂ. ಪರಿಹಾರ:ಗುರುವಾರ ಮೃತಪಟ್ಟ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರವು ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಕೆಎಂಸಿಆರ್​ಐ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ಘೋಷಣೆ ಮಾಡಿದ್ದರು.

ಇದನ್ನೂ ಓದಿ:ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು; ಸಾವಿನ ಸಂಖ್ಯೆ 4ಕ್ಕೇರಿಕೆ

ABOUT THE AUTHOR

...view details