ಹುಬ್ಬಳ್ಳಿ:ಇಲ್ಲಿನಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ನಡೆದ ನನ್ನ ಮಗಳು ನೇಹಾ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನನ್ನ ಮಗಳಿಗಾದ ಅನ್ಯಾಯ ಬೇರಾವ ಹೆಣ್ಣು ಮಗಳಿಗೂ ಆಗಬಾರದು ಎಂದು ನಿರಂಜನಯ್ಯ ಹಿರೇಮಠ ಆಗ್ರಹಿಸಿದರು.
ಇಂದು ಮಗಳ ಶವವನ್ನು ಮನೆಗೆ ತಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೀತಿಸುವಂತೆ ನನ್ನ ಮಗಳನ್ನು ಆರೋಪಿ ಪದೇ ಪದೇ ಪೀಡಿಸುತ್ತಿದ್ದ. ಆದರೆ ಮಗಳು ನೇರವಾಗಿ ನಿರಾಕರಿಸಿದ್ದಳು. ನಿಮ್ಮ ಜಾತಿನೇ ಬೇರೆ. ಇದಕ್ಕೆಲ್ಲ ಒಪ್ಪುವುದಿಲ್ಲ. ಪ್ರೀತಿ ಅಂತ ನನಗೆ ತೊಂದರೆ ಕೊಡಬೇಡ ಎಂದು ಹಲವು ಬಾರಿ ಆತನಿಗೆ ಎಚ್ಚರಿಕೆ ನೀಡಿದ್ದಳು.
ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಆತ, ನೀನು ನನ್ನ ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಆತನ ಪೋಷಕರೊಂದಿಗೆ ನನ್ನ ಸಹೋದರ ಸಹ ಮಾತನಾಡಿದ್ದನು. ಹೀಗಿದ್ದರೂ ಕೊನೆಗೂ ಆರೋಪಿ ಕೊಲೆ ಮಾಡಿದ್ದಾನೆ. ಆತನಿಗೆ ಗಲ್ಲು ಶಿಕ್ಷೆಯಾಗಬೇಕು. ಕೊಲೆಗಾರನ ಜೊತೆಗೆ ನಾಲ್ಕೈದು ಜನ ಅದೇ ಸಮುದಾಯದವರು ಇದ್ದರು. ಈ ಪ್ರಕರಣವನ್ಜು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.