ಬೆಂಗಳೂರು: ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು (ಬಿಪಿಎಲ್) ಪಡೆಯಲು ಸಾಕಷ್ಟು ನಿಯಮಗಳನ್ನು ರೂಪಿಸಲಾಗಿದೆ. ಸರ್ಕಾರದ ಸವಲತ್ತು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಹಾಗಾಗಿ, ಪ್ರತಿಯೊಬ್ಬರು ರೇಷನ್ ಕಾರ್ಡ್ ಪಡೆಯಲು ಬಯಸುತ್ತಾರೆ. ವಿಶೇಷವಾಗಿ ಬಿಪಿಎಲ್ ಕಾರ್ಡ್ನಿಂದ ಬಹಳಷ್ಟು ಅನುಕೂಲಗಳಿದ್ದು, ಆ ಕಾರ್ಡ್ ಪಡೆಯಲು ಬಡ ಮತ್ತು ಮಧ್ಯಮ ವರ್ಗದ ಜನರು ಮುಂದಾಗುತ್ತಾರೆ.
ರಾಜ್ಯದಲ್ಲಿ ಕೆಲ ತಿಂಗಳಿಂದ ಪಡಿತರ ಕಾರ್ಡ್ ಕೊಡುವುದನ್ನು ನಿಲ್ಲಿಸಿದ್ದ ಸರ್ಕಾರ, ಇದೀಗ ಹೊಸ ಪಡಿತರ ಚೀಟಿ ವಿತರಣೆ ಮಾಡಲು ತೀರ್ಮಾನಿಸಿದೆ. ಏಪ್ರಿಲ್ 1 ರಿಂದ ಬಿಪಿಎಲ್, ಎಪಿಎಲ್ ಕಾರ್ಡ್‍ಗಳಿಗೆ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬಿಪಿಎಲ್ ಕಾರ್ಡ್ಗೆ ಇವರು ಅನರ್ಹರು:ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲ ಖಾಯಂ ನೌಕರರು, ಜಿಎಸ್‍ಟಿ ಆದಾಯ ಸೇವಾ ತೆರಿಗೆ ವೃತ್ತಿ ತೆರಿಗೆ ಪಾವತಿಸುವವರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತು ಪಡಿಸಿ ನಗರ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತಕ್ಕಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ಗೆ ಅನರ್ಹರು. ಹಾಗೆಯೇ ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ, ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕಿ ಮತ್ತಿತರ ವಾಹನ ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವ ಎಲ್ಲ ಕುಟುಂಬಗಳನ್ನೂ ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕುಟುಂಬದ ಆದಾಯ 1.20 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅವರಿಗೂ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ.
ಇದನ್ನೂ ಓದಿ: ಕೇಂದ್ರದ ಸೌರ ಮೇಲ್ಛಾವಣಿ ಯೋಜನೆಗೆ ಹೊಸ ಹೆಸರು: ಅನುಕೂಲಗಳೇನು? ಹೀಗೆ ಅರ್ಜಿ ಹಾಕಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ 2.95 ಲಕ್ಷ ಅರ್ಜಿಗಳನ್ನು ಎಪಿಎಲ್ ಹಾಗೂ ಬಿಪಿಎಲ್‍ಗಾಗಿ ಸ್ವೀಕರಿಸಲಾಗಿತ್ತು. ಚುನಾವಣಾ ಕಾರಣಕ್ಕೆ ಹೊಸ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಿದ್ದರಿಂದ ಅರ್ಜಿಗಳು ಬಾಕಿ ಉಳಿದಿದ್ದವು. ಈವರೆಗೂ ಅವುಗಳ ಪೈಕಿ 57 ಸಾವಿರ ಅರ್ಜಿಗಳಿಗೆ ಕಾರ್ಡ್ ನೀಡಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ಆಯುಕ್ತರು ಮತ್ತು ಉಪ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಮಾರ್ಚ್ 31ರೊಳಗೆ ಇತ್ಯರ್ಥಪಡಿಸಲು ಗಡುವು ನೀಡಲಾಗಿದೆ.