ಕಾರವಾರ: ಪ್ರಕೃತಿಯಲ್ಲೂ ದೇವರನ್ನು ಕಾಣುವ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಆಚರಣೆಗಳು ಇಂದಿಗೂ ರೂಢಿಯಲ್ಲಿವೆ. ಕೆಲವು ಸಂಪ್ರದಾಯಗಳು ಆಧುನಿಕತೆಯ ಭರಾಟೆಯಲ್ಲಿ ಈಗ ಮರೆಯಾಗಿದ್ದರೂ, ಕೆಲವೆಡೆ ಸಂಪ್ರದಾಯಗಳನ್ನು ಚಾಚೂತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿಯೂ ಕರಾವಳಿಯಲ್ಲಿ ಆಚರಿಸಲಾಗುವ ಹೊಸ್ತು ಹಬ್ಬ ಹಲವು ವಿಶೇಷತೆಗಳಿಂದ ಕೂಡಿದ್ದು, ತಾವು ಬೆಳೆದ ಪೈರಿಗೆ ಮನೆ ಮಂದಿಯೆಲ್ಲ ಸೇರಿ ಪೂಜೆ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಒಟ್ಟು ಸೇರಿ ಇಂದು ಹೊಸ್ತಿನ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸುವಂತಿಲ್ಲ. ನೂರಾರು ವರ್ಷಗಳಿಂದ ಈ ಭಾಗದ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಇದನ್ನು ಹರಣ ಮೂರ್ತ, ಹೊಸ ಧಾನ್ಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಹಬ್ಬದ ದಿನದಂದು ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಈ ಹಬ್ಬಕ್ಕಾಗಿಯೇ ಮೀಸಲಾಗಿಡುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರುತ್ತಾರೆ. ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಂಡರು. ಪ್ರತಿವರ್ಷ ವಿಜಯದಶಮಿಯಂದು ಹಬ್ಬ ಆಚರಿಸಲಾಗುತ್ತದೆ. ಅಂದು ಆಚರಿಸಲಾಗದೆ ಇದ್ದರೆ, ಗಂಗಾಷ್ಠಮಿಯಂದು ಆಚರಣೆ ಮಾಡಲಾಗುತ್ತದೆ. ಈ ಸಲ ವಿಜಯ ದಶಮಿಯಂದು ಆಚರಿಸದ ಹಿನ್ನಲೆಯಲ್ಲಿ ಗಂಗಾಷ್ಠಮಿಯಂದು ಹಬ್ಬ ನಡೆಯಿತು ಎನ್ನುತ್ತಾರೆ ಅರ್ಚಕ ಭಾಸ್ಕರ್ ದೇಸಾಯಿ.