ಬೆಂಗಳೂರು:ಸಿ.ಟಿ.ರವಿ ಅವರುರಾಹುಲ್ ಗಾಂಧಿಗೂ ಡ್ರಗ್ ಅಡಿಕ್ಟ್ ಅಂದಿದ್ದಾರೆ, ಅದನ್ನೂ ಪರಿಶೀಲಿಸ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಆರೋಪ ಸಂಬಂಧ ಅವರು ಪ್ರತಿಕ್ರಿಯಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಮೂಲತಃ ಇದು ಅವರು ಬೈದಿದ್ದಕ್ಕೆ ಶುರುವಾಯ್ತು. ಹಿರಿಯ ಜನಪ್ರತಿನಿಧಿ ಆಗಿ ಅವರು ಬೈದಿದ್ದು ಸರಿಯಲ್ಲ. ಅವರು ಏಕೆ ಬೈಯಬೇಕಿತ್ತು? ಸಿ.ಟಿ.ರವಿ ಆ ಪದ ಹೇಳಿದ್ದಾರೆ'' ಎಂದು ಟೀಕಿಸಿದರು.
ಪೊಲೀಸರು ಎಲ್ಲವನ್ನೂ ಕೇಳಿ ಮಾಡಲ್ಲ:''ಸಿ.ಟಿ.ರವಿಯನ್ನು ರಾತ್ರಿ ಎಲ್ಲ ಸುತ್ತಾಡಿಸಿರುವುದು ನಮಗೆ ಗೊತ್ತಿಲ್ಲ. ಬಂಧಿಸಿರುವುದು ಗೊತ್ತು. ಪೊಲೀಸರು ಕೆಲವೊಂದನ್ನು ಅವರ ಮಿತಿಯಲ್ಲೇ ಮಾಡುತ್ತಾರೆ. ಪೊಲೀಸರು ಎಲ್ಲವನ್ನೂ ಕೇಳಿ ಮಾಡಲ್ಲ. ಇವತ್ತು ಕೋರ್ಟಿಗೆ ಹಾಜರುಪಡಿಸ್ತಾರೆ. ಆ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡುತ್ತಾರೆ. ಸಿ.ಟಿ.ರವಿ ತಲೆಗೆ ಪೆಟ್ಟು ಬಿದ್ದಿರುವುದು ಗೊತ್ತಿಲ್ಲ. ಪೊಲೀಸ್ ಮಾಹಿತಿಗಳು ರಹಸ್ಯ, ಬಯಲು ಮಾಡಲು ಆಗಲ್ಲ. ಕೆಲವು ವಿಚಾರ ನಿಮಗೆ ಹೇಳಲು ಆಗಲ್ಲ'' ಎಂದರು.
''ಬಿಜೆಪಿಯಿಂದ ಪ್ರತಿಭಟನೆ ಆಗುವ ರೀತಿ ನಮ್ಮವರಿಂದಲೂ ಪ್ರತಿಭಟನೆ ಆಗುತ್ತಿದೆ. ನಮ್ಮ ಕಾರ್ಯಕರ್ತರೂ ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಯಾರೂ ಪೊಲೀಸರಿಗೆ ಏನೂ ಸೂಚನೆ ಕೊಟ್ಟಿಲ್ಲ. ಪೊಲೀಸರಿಗೆ ಏನು ಸರಿ ಅನ್ನಿಸಿದೆಯೋ ಅದನ್ನು ಮಾಡಿದ್ದಾರೆ. ಸಿಎಂ, ಗೃಹ ಸಚಿವರು ನಾವು ಎಲ್ಲಾ ಹಿಂಗೆ ಮಾಡಿ ಎಂದು ಪೊಲೀಸರಿಗೆ ಹೇಳಲ್ಲ'' ಎಂದು ತಿಳಿಸಿದರು.