ಬೆಂಗಳೂರು:ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಅವರ ಆರೋಪವನ್ನು ತನಿಖೆಯಲ್ಲಿ ಪರಿಗಣಿಸುವಂತೆ ನಿರ್ದೇಶಿಸಲಾಗಿದೆ. ವರ್ಗಾವಣೆ ವಿಚಾರವಾಗಿ ಸ್ಥಳೀಯ ಶಾಸಕರೊಬ್ಬರ ಮೇಲೆ ಪರಶುರಾಮ್ ಪತ್ನಿ ಆರೋಪ ಮಾಡಿದ್ದಾರೆ. ಅದು ಆರೋಪ ಮಾತ್ರ. ತನಿಖೆ ನಡೆಯಬೇಕು. ಆರೋಪ ಮಾಡಿದ ತಕ್ಷಣವೇ ಅದು ಸತ್ಯ ಎಂದಾಗಲಿ ಅಥವಾ ಸುಳ್ಳು ಎಂದಾಗಲಿ ಹೇಳಲಾಗುವುದಿಲ್ಲ, ತನಿಖೆಯಾಗಲಿ' ಎಂದು ಹೇಳಿದರು.
'ಪರಶುರಾಮ್ ಸಾವು ಸಹಜವಾಗಿದೆ. ಆತ್ಮಹತ್ಯೆ ಅಲ್ಲ. ಮರಣದ ಮುನ್ನ ಬರೆದಿರುವ ಯಾವುದೇ ಪತ್ರಗಳು ದೊರೆತಿಲ್ಲ. ಕುಟುಂಬದ ಸದಸ್ಯರು ವರ್ಗಾವಣೆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದನ್ನು ನಾವು ತಳ್ಳಿಹಾಕುವುದಿಲ್ಲ. ತನಿಖೆ ಮಾಡಲು ಸೂಚಿಸಿದ್ದೇನೆ' ಎಂದರು.
'ಪ್ರಾಥಮಿಕ ಸಾಕ್ಷ್ಯ ಹಾಗೂ ಮಾಹಿತಿ ಕಲೆ ಹಾಕಿದ ಬಳಿಕ ಎಫ್‍ಐಆರ್ ದಾಖಲಿಸುತ್ತಾರೆ. ಹಾಗಾಗಿ ವಿಳಂಬವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದು ಸರಿಯಲ್ಲ. ಪ್ರಕರಣದಲ್ಲಿ ಕಾನೂನಿನ ಪಾಲನೆಯನ್ನಷ್ಟೇ ನಾವು ಮಾಡುತ್ತೇವೆ. ಅಧಿಕಾರಿಯ ಸಮುದಾಯ ಅಥವಾ ಜಾತಿಯನ್ನು ನಾವು ಪರಿಗಣಿಸುವುದಿಲ್ಲ. ಬಿಜೆಪಿ ನಾಯಕರು ಆರೋಪ ಮಾಡುವ ವಿಚಾರ ಕುರಿತಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ಒಂದು ವೇಳೆ ಪ್ರಕರಣದಲ್ಲಿ ಶಾಸಕರು ಭಾಗಿಯಾಗಿದ್ದರೂ ಕೂಡ ಎಫ್‍ಐಆರ್ ದಾಖಲಾದ ಬಳಿಕ ತನಿಖೆ ಮುಂದುವರೆಯಲಿದೆ' ಎಂದು ತಿಳಿಸಿದರು.