ಬೆಳಗಾವಿ:''ಬೀದರ್ ಎಟಿಎಂ ದರೋಡೆ ಪ್ರಕರಣದಲ್ಲಿ ಖಚಿತ ಮಾಹಿತಿ ಸಿಕ್ಕಿದೆ. ಉತ್ತರಪ್ರದೇಶದಲ್ಲಿ ಆರೋಪಿಗಳು ಇರುವ ಬಗ್ಗೆ ಗೊತ್ತಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಬಂಧಿಸಲಾಗುತ್ತದೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು. ''ಜೊತೆಗೆ, ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಮಾಡಿದ ಆರು ಜನರ ಪೈಕಿ ಮೂವರನ್ನು ತಮಿಳುನಾಡಿನ ತಿರುನಲ್ಲವೇಲಿಯಲ್ಲಿ ಚಿನ್ನಾಭರಣ ಮತ್ತು ನಗದು ಸಮೇತ ಬಂಧಿಸಲಾಗಿದೆ'' ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ ಅವರು ದರೋಡೆ ಮಾಡಿದ್ದ ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. 3-4 ಕೆಜಿ ಚಿನ್ನಾಭರಣ, ನಗದು ಸೇರಿ ಒಟ್ಟು 4 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಸದ್ಯ ವಿಚಾರಣೆ ಮಾಡುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಎಂದರು.
ದರೋಡೆ ಆರೋಪಿಗಳು ಬೇರೆ ಬೇರೆ ಗ್ಯಾಂಗ್:''ಮಂಗಳೂರು ಮತ್ತು ಬೀದರ್ ಬ್ಯಾಂಕ್ ದರೋಡೆ ಪ್ರಕರಣಗಳು ಎರಡೂ ಬೇರೆ ಬೇರೆ ಗ್ಯಾಂಗ್ಗಳು. ಮಂಗಳೂರು ಪ್ರಕರಣದಲ್ಲಿ ತಮಿಳುನಾಡು ಮತ್ತು ಕೇರಳ ಆರೋಪಿಗಳಿದ್ದರೆ, ಬೀದರ್ ಪ್ರಕರಣದಲ್ಲಿ ಉತ್ತರಪ್ರದೇಶದವರಿದ್ದಾರೆ'' ಎಂದು ಮಾಧ್ಯಮದವರ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು.