ತುಮಕೂರು/ಬೆಂಗಳೂರು:ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿಯ ಕೊಲೆ ವಿಚಾರದಲ್ಲಿ ಸದ್ಯದ ಮಾಹಿತಿಯಂತೆ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ದೂರ ಆಗುವುದಕ್ಕೆ ಪ್ರಯತ್ನಿಸಿದಾಗ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಇದರಲ್ಲಿ ಯಾವುದೇ ಲವ್ ಜಿಹಾದ್ ಕಾಣುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಈ ಕುರಿತು ಇಂದು ತುಮಕೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬಿಜೆಪಿಯವರು ಸ್ವಾಭಾವಿಕವಾಗಿ ಇಂಥ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾರೆ. ಅದು ಅಷ್ಟು ಸಮಂಜಸ ಅಲ್ಲ. ಸಮಾಜದಲ್ಲಿ ನಡೆಯುವುದನ್ನು ನಾವು ಕಾನೂನು ಪ್ರಕಾರವೇ ಕಂಟ್ರೋಲ್ ಮಾಡ್ತೀವಿ, ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಈ ಚುನಾವಣೆಯ ಸಂದರ್ಭದಲ್ಲಿ ಒಳ್ಳೆಯದಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಷನ್ ಹಾಕಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರಲ್ಲಿ ನಡೆದ ಘಟನೆಯ ಕುರಿತು ಪ್ರತಿಕ್ರಿಯಿಸಿ, ಶ್ರೀರಾಮ ನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗುತ್ತಾರೆ. ಅದಕ್ಕೆ ಇನ್ನೊಬ್ಬರು ಬೇರೆ ಸ್ಲೋಗನ್ ಕೂಗಿದ್ದಾರೆ. ಈ ಘಟನೆ ನಡೆದ ಬಳಿಕ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇಂಥ ಘಟನೆಗಳಲ್ಲಿ ಯಾರನ್ನೂ ರಕ್ಷಣೆ ಮಾಡುವುದಾಗಲೀ, ಓಲೈಸುವುದಾಗಲೀ ನಾವು ಮಾಡುವುದಿಲ್ಲ. ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ನೇಹಾ ಹಿರೇಮಠ ಕೊಲೆ ಪ್ರಕರಣ: "ಎನ್ಕೌಂಟರ್ ಕಾನೂನು ಬರಲೇಬೇಕು": ಸಂತೋಷ್ ಲಾಡ್ - Minister Santosh Lad