ಕರ್ನಾಟಕ

karnataka

ETV Bharat / state

ಹೆಚ್.ಎಂ.ಟಿ. ಅರಣ್ಯ ಭೂಮಿ ವಿಚಾರ: ಹಿರಿಯ ಅರಣ್ಯಾಧಿಕಾರಿಗಳಿಗೆ ಕಾರಣ ಕೇಳಿ ಸಚಿವರ ನೋಟಿಸ್ - notice to senior forest officer - NOTICE TO SENIOR FOREST OFFICER

ಭೂಮಿ ಡಿನೋಫೈ ಮಾಡಲು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಹಿರಯ ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ್​ ಖಂಡ್ರೆ ಅವರು ಕಾರಣ ನೀಡುವಂತೆ ಕೇಳಿ ನೋಟಿಸ್​ ಜಾರಿ ಮಾಡಿದ್ದಾರೆ.

Minister Ishwar Khandre
ಸಚಿವ ಈಶ್ವರ್​ ಖಂಡ್ರೆ (ETV Bharat)

By ETV Bharat Karnataka Team

Published : Sep 25, 2024, 3:00 PM IST

ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ, ಸಚಿವರ ಮತ್ತು ಸಚಿವ ಸಂಪುಟದ ಅನುಮೋದನೆ ಇಲ್ಲದೆ ಪೀಣ್ಯ- ಜಾಲಹಳ್ಳಿ ಪ್ಲಾಂಟೇಷನ್​ನಲ್ಲಿ ಹೆಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ಹಿರಿಯ ಅರಣ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಂಬಂಧ ನೀಡಿರುವ ಟಿಪ್ಪಣಿಯಲ್ಲಿ ಕರ್ನಾಟಕ ಅರಣ್ಯ ಕೈಪಿಡಿಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಬಳಿಕ ಆ ಅರಣ್ಯವನ್ನು 'ಯಾವತ್ತೂ ಅರಣ್ಯವಲ್ಲ' ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು ಎಂಬುದು ಸ್ಪಷ್ಟವಾಗಿದೆ.

ಜೊತೆಗೆ ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಪ್ರಥಮ ಪರಿಶಿಷ್ಟದಲ್ಲಿ ಕೂಡ ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ 5ಕೋಟಿ ರೂ.ಗಿಂತ ಹೆಚ್ಚಾಗಿದ್ದಲ್ಲಿ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಆದರೆ ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್​ಗೆ ಐ. ಎ. ಸಲ್ಲಿಸಿದ್ದು, ಇದು ಶಂಕಾಸ್ಪದವಾಗಿದೆ. ಜೊತೆಗೆ ಹೆಚ್.ಎಂ.ಟಿ. ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಇದರಿಂದಾಗಿ ಹೆಚ್.ಎಂ.ಟಿ. ಈವರೆಗೆ 165 ಎಕರೆ ಜಮೀನನ್ನು, 3,13,65,52,681 ರೂಪಾಯಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿರುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಈ ಮಧ್ಯೆ 2015ರಲ್ಲಿ ಅಂದಿನ ಎ.ಪಿ.ಸಿ.ಸಿ.ಎಫ್ ವೆಂಕಟಸುಬ್ಬಯ್ಯ ಅವರು ಹೆಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿ ತೆರವಿಗೆ 64ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿರುತ್ತಾರೆ. ಈ ಆದೇಶದ ವಿರುದ್ಧ ಹೆಚ್.ಎಂ.ಟಿ. ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ. ಹೀಗಾಗಿ ಇದು ಅರಣ್ಯ ಇಲಾಖೆಯ ಸ್ವತ್ತಾಗಿರುತ್ತದೆ. ವಸ್ತುಸ್ಥಿತಿ ಹೀಗಿರುವಾಗ, ಕೆಲವು ಹಿರಿಯ ಅರಣ್ಯಾಧಿಕಾರಿಗಳು ಅಂದಿನ ಅರಣ್ಯ ಸಚಿವರಿಂದ ಲಿಖಿತ ಅನುಮತಿ ಪಡೆಯದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ ಹೆಚ್.ಎಂ.ಟಿ. ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸುಪ್ರೀಂಕೋರ್ಟ್​ಗೆ ಮಧ್ಯಂತರ ಅರ್ಜಿ (ಐ.ಎ.)ಸಲ್ಲಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಅಂದಿನ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಸಾವಿರಾರು ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂಕೋರ್ಟ್​ಗೆ ಐ.ಎ. ಹಾಕಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ 7 ದಿನಗಳ ಒಳಗಾಗಿ ಉತ್ತರ ಪಡೆದು, ಮುಂದಿನ ಕ್ರಮ ಜರುಗಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಹೆಚ್.ಎಂ.ಟಿ. ಪ್ರದೇಶ ಲಾಲ್​ಬಾಗ್​ನಂತೆ ಅಭಿವೃದ್ಧಿ:ಸುಪ್ರೀಂಕೋರ್ಟ್​ನಲ್ಲಿ ಅರಣ್ಯ ಇಲಾಖೆ ಸಲ್ಲಿಸಿರುವ ಐ.ಎ. ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆದ ಬಳಿಕ ಇಲ್ಲಿ ಲಾಲ್​ಬಾಗ್ ಅಥವಾ ಕಬ್ಬನ್ ಉದ್ಯಾನದ ಮಾದರಿಯಲ್ಲಿ ಸಸ್ಯೋದ್ಯಾನ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಸಿಸಿಎಫ್ ಕಚೇರಿ ಆವರಣದಲ್ಲೇ ಮರಗಳ ಕಡಿತ: ಕಾರಣ ಕೇಳಿ ಸಚಿವ ಈಶ್ವರ್ ಖಂಡ್ರೆ ನೋಟಿಸ್ - Trees Cut In CCF Office Premises

ABOUT THE AUTHOR

...view details