ಕುಮಟಾ (ಉತ್ತರ ಕನ್ನಡ):ತಾಲೂಕಿನ ಬರ್ಗಿ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದ್ದು, ಹೆದ್ದಾರಿಯಲ್ಲಿ ತೆರವು ಕಾರ್ಯ ನಡೆಸುತ್ತಿರುವಾಗಲೇ ಕುಸಿಯುತ್ತಿರುವ ಗುಡ್ಡದ ದೃಶ್ಯಗಳು ಭಯಹುಟ್ಟಿಸುವಂತಿವೆ. ಗುರುವಾರ ಮುಂಜಾನೆ ಬರ್ಗಿ ಬಳಿ ಹೆದ್ದಾರಿ ಮೇಲೆ ಕುಸಿದಿದ್ದ ಗುಡ್ಡವನ್ನು ಐಆರ್ಬಿ ಕಂಪನಿಯವರು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಏಕಮುಕ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ದಿನವಿಡೀ ಭಾರಿ ಮಳೆಯಾಗಿದ್ದು, ಗುಡ್ಡ ತೆರವು ಮಾಡುತ್ತಿರುವಾಗಲೇ ಬೃಹತ್ ಪ್ರಮಾಣದಲ್ಲಿ ಮಣ್ಣು ಜಾರಿ ಬಂದಿದೆ. ಇದನ್ನು ಕಂಡು ಜೆಸಿಬಿಯೊಂದಿಗೆ ಗುಡ್ಡ ತೆರವು ಮಾಡುತ್ತಿದ್ದ ಐಆರ್ಬಿ ಕಂಪನಿಯ ಸಿಬ್ಬಂದಿಯು ತಕ್ಷಣ ದೂರ ತೆರಳಿ ಕಾರ್ಯಾಚರಣೆ ನಿಲ್ಲಿಸಿದ್ದರು.