ಮೈಸೂರು:ಮುಡಾ ಹಗರಣ ಬೆಳಕಿಗೆ ಬಂದ ನಂತರ, ಎರಡನೇ ಬಾರಿ ಮುಡಾದ ಸಾಮಾನ್ಯ ಸಭೆ ಶನಿವಾರ ನಡೆಯಿತು. ಈ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಿವೆ.
ಅದರಲ್ಲಿ ಪ್ರತಿನಿತ್ಯ ಮುಡಾ ಕೆಲಸಗಳು ಸುಸೂತ್ರವಾಗಿ ನಡೆಯಲು, ಯಾವುದೇ ಅಡ್ಡಿಯಾಗದಂತೆ ಕೆಲಸ ನಿರ್ವಹಿಸುವ ಬಗ್ಗೆ ಹಾಗೂ 300 ಹೊಸ ಖಾಸಗಿ ಲೇಔಟ್ಗಳ ರಚನೆಗೆ ಅನುಮತಿ ಸೇರಿದಂತೆ, ಹಲವು ವಿಚಾರಗಳು ಚರ್ಚೆಯಾದವು.
ಸಾಮಾನ್ಯ ಸಭೆಯ ನಂತರ ಶ್ರೀವತ್ಸ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಹಾಗೂ ಮತ್ತೊಬ್ಬ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನಿನ್ನೆಯ ಸಾಮಾನ್ಯ ಸಭೆಯಲ್ಲಿ ಚರ್ಚಿತ ವಿಷಯಗಳು ಹಾಗೂ 50:50 ಅನುಪಾತದ ಹಗರಣಗಳ ಬಗ್ಗೆ ಮಾತನಾಡಿದ್ದಾರೆ.
ಶನಿವಾರ ನಡೆದ ಮುಡಾದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ವಹಿಸಿದ್ದರು. ಈ ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ಜಿ. ಟಿ. ದೇವೇಗೌಡ, ಶ್ರೀವತ್ಸ, ಹರೀಶ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ, ವಿವೇಕಾನಂದ, ಹೆಚ್. ವಿಶ್ವನಾಥ್, ಸಿ. ಎನ್. ಮಂಜೇಗೌಡ, ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ , ತಿಮ್ಮಯ್ಯ, ಹಾಗೂ ಮುಡಾದ ಆಯುಕ್ತ ರಘುನಂದನ್ ಜತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಗೂ ಮುನ್ನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, "ಕಳೆದ ಒಂದು ವರ್ಷದಿಂದ ಮುಡಾದ ಸಭೆಗಳು ಆಗಿರಲಿಲ್ಲ. ಜನಸಾಮಾನ್ಯರ ಪ್ರತಿನಿತ್ಯದ ಒಂದಿಷ್ಟು ಕೆಲಸಗಳಿಗೆ, ಸಂಬಂಧಿಸಿದ ವಿಷಯಗಳು ಬಾಕಿ ಇದ್ದವು. ಅವುಗಳನ್ನು ಇಟ್ಟು ಚರ್ಚೆ ಮಾಡುತ್ತೇವೆ. ಮುಡಾ ಹಗರಣ ಕುರಿತು ಸರ್ಕಾರದಿಂದ ಏಕಸದಸ್ಯ ನ್ಯಾಯಾಂಗ ತನಿಖೆ ಆಗುತ್ತಿದೆ. ತನಿಖಾ ವರದಿ ಬಂದ ನಂತರ ಇತರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ" ಎಂದರು.
ಸಭೆಯ ನಂತರ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದು ಹೀಗೆ: "ಸಭೆಯಲ್ಲಿ 300ಕ್ಕೂ ಹೆಚ್ಚಿನ ವಿಷಯಗಳ ಪ್ರಸ್ತಾವನೆ ಆಗಿತ್ತು. ಮುಡಾ ಹಗರಣ ನಡುವೆಯೇ 300 ಹೊಸ ಖಾಸಗಿ ಲೇಔಟ್ಗಳಿಗೆ ಅನುಮತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ. ಸಭೆಯಲ್ಲಿ 50-50 ಅನುಪಾತದ ಬಗ್ಗೆ ಯಾವ ಮಹತ್ವದ ಚರ್ಚೆಯಾಗಿಲ್ಲ. ಕೇವಲ ಹೊಸ ಲೇಔಟ್ಗಳ ಅನುಮತಿ ಬಗ್ಗೆ, ಚರ್ಚೆ ಮಾಡಿ ಅನುಮೋದನೆ ನೀಡಿದ್ದೇವೆ. ದೇಸಾಯಿ ಆಯೋಗದ ವರದಿ ಆಧಾರದ ಮೇಲೆ 50-50 ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ" ಎಂದು ಅಧ್ಯಕ್ಷರು ಮಾಹಿತಿ ಕೊಟ್ಟಿದ್ದಾರೆ.
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿಕೆ: "ಮುಡಾ ಸಭೆಯಲ್ಲಿ ಇದ್ದ ಎಲ್ಲಾ ವಿಷಯಗಳನ್ನು ಚರ್ಚೆ ಮಾಡಿದ್ದೇವೆ. ನಂತರ ಎಲ್ಲೆಲ್ಲಿ ವಿನ್ಯಾಸ ನಕ್ಷೆಗಳನ್ನು ಅನುಮೋದನೆ ಮಾಡಬೇಕಿದೆ, ಕಟ್ಟಡ ಕಟ್ಟುವ ನಕ್ಷೆಯನ್ನು ಅನುಮೋದನೆ ಮಾಡಬೇಕಿದೆ. ಮತ್ತು ಭೂ ಪರಿವರ್ತನೆಗೆ ಸಿಡಿಪಿಯಲ್ಲಿರುವ ಉದ್ದೇಶಗಳ ಅರ್ಜಿಯನ್ನು ಚರ್ಚೆ ಮಾಡಿ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅನುಮೋದನೆ ನೀಡಿದ್ದೇವೆ. ಕಾನೂನು ಬದ್ಧವಾಗಿ ಇದ್ದ ಹೊಸ ಲೇಔಟ್ಗಳಿಗೆ ಅನುಮೋದನೆ ನೀಡಲಾಗಿದೆ".
"ಸಭೆಯಲ್ಲಿ 3,24 ವಿಷಯಗಳಿದ್ದು, ಅದರಲ್ಲಿ 320ಕ್ಕೆ ಅನುಮೋದನೆ ನೀಡಿದ್ದೇವೆ. 50:50 ಅನುಪಾತದ ಅಕ್ರಮದಲ್ಲಿ ಮೈಸೂರು ಮುಡಾ ಇಡೀ ವಿಶ್ವದಲ್ಲಿ ಚರ್ಚೆ ಆಗುತ್ತಿದೆ. ಅಕ್ರಮವಾಗಿ ಹಂಚಿಕೆಯಾಗಿರುವ ಸೈಟ್ಗಳ ವಿಚಾರ ನಾನೇ ಪ್ರಸ್ತಾವನೆ ಮುಂದಿಟ್ಟೆ. ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಹಿನ್ನೆಲೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ದಿನಗಳಲ್ಲಿ ಚರ್ಚೆ ನಡೆಯುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ".
"ಸಿದ್ದರಾಮಯ್ಯ ಸ್ವಾಭಿಮಾನ ಸಮಾವೇಶ ವಿಚಾರವಾಗಿ, ಈ ಸಮಾವೇಶನವನ್ನು ಕಾಂಗ್ರೆಸ್ ಪಕ್ಷದಿಂದಲೇ ಮಾಡಲಾಗುತ್ತಿದೆ. ಸಿದ್ದರಾಮಯ್ಯಗೆ ಶಕ್ತಿ ತುಂಬಿದರೆ ಅದು ಕಾಂಗ್ರೆಸ್ಗೆ ಶಕ್ತಿ ತುಂಬಿದಂತೆ. ಸಮಾವೇಶದ ಬಗ್ಗೆ ಬೇರೆ ಯಾವುದೇ ಊಹಾಪೋಹಗಳಿಗೆ ಅವಕಾಶ ಇಲ್ಲ. ಪಕ್ಷದ ಅಧ್ಯಕ್ಷರ ಸಮ್ಮುಖದಲ್ಲೇ ಅಹಿಂದ ಸಂಘಟನೆಯ ಈ ಸಮಾವೇಶ ನಡೆಯುತ್ತೆ. ಸಚಿವ ಸಂಪುಟ ವಿಚಾರವಾಗಿ ಪುನಾರಚನೆಯ ಯಾವ ವಾತಾವರಣ ಪಕ್ಷದಲ್ಲಿ ಈಗ ಇಲ್ಲ. ಪುನಾರಚನೆ ಮಾಡಿದರೆ ನಾನು ಕೂಡ ಆಕಾಂಕ್ಷಿ. ಎಲ್ಲರಿಗೂ ಸಚಿವನಾಗುವ ಆಸೆ ಇರುತ್ತೆ ಅದೇ ರೀತಿ ನನಗು ಇದೆ" ಎಂದರು.
ಶಾಸಕ ಹರೀಶ್ ಗೌಡ ಮಾಹಿತಿ:ಸಭೆ ನಂತರ ಮಾತನಾಡಿದ ಶಾಸಕ "50-50 ಅನುಪಾತದಲ್ಲಿ ಎಷ್ಟು ನಿವೇಶನ ಹಂಚಲಾಗಿದೆ ಎಂಬ ಲೆಕ್ಕವೇ ಇನ್ನೂ ಸಿಕ್ಕಿಲ್ಲ. 50-50ಯಲ್ಲಿ ಅಕ್ರಮ ಯಾವುದು, ಸಕ್ರಮ ಯಾವುದು ಎಂದು ಬೇರ್ಪಡಿಸುವುದು ಕಷ್ಟವಾಗಿದೆ. ನಾನು ಕಳೆದ ಬಾರಿ ಸಭೆಯಲ್ಲಿ 4 ಸಾವಿರ ಸೈಟ್ ಬಗ್ಗೆ ಮಾಹಿತಿ ಕಲೆ ಹಾಕಿದ್ದೆ. ಈಗ ಆ ಸಂಖ್ಯೆಯು ಇನ್ನೂ ಹೆಚ್ಚಳವಾಗುತ್ತಿದೆ. ಮುಂದಿನ ಪ್ರಾಧಿಕಾರದ ಸಭೆಯಲ್ಲಿ 50-50 ಅನುಪಾತದ ಬಗ್ಗೆಯೆ ಪ್ರತ್ಯೇಕವಾದ ಚರ್ಚೆ ಮಾಡಲು ತೀರ್ಮಾನಿಸಲಾಗಿದೆ. 50-50 ಅನುಪಾತದಲ್ಲಿ ಹಗರಣವಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ:ಮುಡಾ: ಇಡಿ ತನಿಖೆ ಪಾರದರ್ಶಕ ನ್ಯಾಯ ಸಿಗುವ ಭರವಸೆ ಇದೆ- ಆರ್‌ಟಿಐ ಕಾರ್ಯಕರ್ತ ಗಂಗರಾಜು