ಬೆಂಗಳೂರು: 2012 ರಲ್ಲಿ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹೆಚ್.ಎಸ್. ಸುನೀಲ್‌ಕುಮಾರ್ ಅವರ ಹುದ್ದೆಗೆ ಮರು ನೇಮಕ ಮಾಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೊರ್ಟ್ ಎತ್ತಿಹಿಡಿದಿದೆ.
ಆರೋಪಿಯಾಗಿದ್ದ ಸುನೀಲ್ ಕುಮಾರ್ ಅವರಿಗೆ ಎಸ್‌ಡಿಎ ಹುದ್ದೆಗೆ ಮರು ನೇಮಕಕ್ಕೆ ಕೆಎಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ (ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಖಜಾನೆ ನಿರ್ದೇಶನಾಲಯ) ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸೂಕ್ತ ಸಾಕ್ಷ್ಯಾಧಾರಗಳಿಲ್ಲ:ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿ ಹೆಚ್.ಎಸ್.ಸುನೀಲ್ ಕುಮಾರ್, ಸ್ಟ್ರಾಂಗ್ ರೂಮ್ ಬೀಗ ತನ್ನಲ್ಲಿಟ್ಟುಕೊಂಡಿದ್ದರು. 2012ರ ಮಾರ್ಚ್ 15ರಂದು ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಪ್ರಕರಣದ ಸಹ ಆರೋಪಿ ಕೆ.ಪಿ.ವೀರಭದ್ರಪ್ಪ ಅವರನ್ನು ಸಾಕ್ಷ್ಯಗಳ ವಿಚಾರಣೆ ವೇಳೆ ಪರಿಗಣಿಸಿರಲಿಲ್ಲ. ಪ್ರಕರಣದ ಪ್ರಮುಖ ಆರೋಪಿಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿಲ್ಲ ಎಂಬ ಅಂಶವನ್ನು ನ್ಯಾಯಾಧಿಕರಣ ಗಂಭೀರವಾಗಿ ಪರಿಗಣಿಸಿದೆ. ಈ ಅಂಶವು ವಿಚಾರಣೆ ವೇಳೆ ನಡೆದಿರುವ ದೊಡ್ಡ ಲೋಪವಾಗಿದೆ. ಹೀಗಾಗಿ, ಪ್ರತಿವಾದಿ ಅವರು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ, ಅನಧಿಕೃತವಾಗಿ ಸ್ಟ್ರಾಂಗ್ ರೂಮ್ ಬೀಗ ತೆಗೆದು ಪ್ರಶ್ನೆ ಪತ್ರಿಕೆ ಸೋರಿಕೆಗೆ ನೆರವಾಗಿದ್ದಾರೆ ಎಂದು ಹೇಳಲಾಗದು ಎಂದು ಪೀಠ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಂದ ಬಳಿಕ ಪ್ರತಿವಾದಿ ಆರೋಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದರೂ ಸೂಕ್ತ ರೀತಿಯಲ್ಲಿ ವಿಚಾರಣೆಗೊಳಪಡಿಸದೆ, ಪ್ರತಿವಾದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಮೇಲ್ಮನವಿಯಲ್ಲಿ ತಿಳಿಸಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಶಿಸ್ತು ಪ್ರಾಧಿಕಾರ ನೀಡಿದ ವರದಿಯಲ್ಲಿರುವಂತೆ ಸರಿದೂಗಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣ ಸಂಬಂಧ ತನಿಖೆಯ ಕಡತಗಳನ್ನು ಪರಿಶೀಲಿಸಿದರೆ, ಪ್ರತಿವಾದಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಅಲ್ಲದೆ, ಶಿಸ್ತು ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರ ಆದೇಶವನ್ನು ರದ್ದುಗೊಳಿಸಿದ ನಂತರ ಪ್ರಕರಣದ ಆರೋಪಿಯಾಗಿರುವವರನ್ನು ಹುದ್ದೆಗೆ ಮುಂದಿನ ಮೂರು ತಿಂಗಳಲ್ಲಿ ಯಾವುದೇ ರೀತಿಯ ತಡೆಹಿಡಿದಿರುವ ವೇತನ ಪಾವತಿ ಮಾಡದೆ, ಮರು ನೇಮಕ ಮಾಡಿಕೊಳ್ಳುವಂತೆ ಕೆಎಟಿ ಸೂಚನೆ ನೀಡಿದೆ.