ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮಾಗಡಿ ಮುಖ್ಯ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣಕ್ಕಾಗಿ 272 ಎಕರೆಗೂ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ಅಧ್ಯಕ್ಷ ರಾಹುಲ್ ಬಜಾಜ್ ಸೇರಿದಂತೆ ಒಟ್ಟು ಎಂಟು ಜನ ಟ್ರಸ್ಟಿಗಳು ಭೂ ಸ್ವಾಧೀನ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಟ ಎಸ್ ದೀಕ್ಷಿತ್ ಅವರ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ.
ಮೆಗಾ ಕೃಷಿ ಮಾರುಕಟ್ಟೆ ಎಂಬುದು ಒಂದು ಸಾಮಾಜಿಕ ಕಾಳಜಿಯುಳ್ಳ ಯೋಜನೆ. ಕೃಷಿ ನಮ್ಮ ಜೀವನಾಡಿ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ರಾಜ್ಯ ಸರ್ಕಾರ ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣದ ಉದ್ದೇಶಕ್ಕಾಗಿ ಈ ಪ್ರದೇಶವನ್ನು ವಶಕ್ಕೆ ಪಡೆದಿದ್ದು, ರೈತರಿಗೆ ಸಹಕಾರಿಯಾಗಲಿದೆ. ಈ ಪ್ರಕ್ರಿಯೆ ಸಂವಿಧಾನ ಪರವಾಗಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದಲ್ಲಿ ಅರ್ಜಿದಾರರು ಪರಿಹಾರ ನೀಡಿಕೆಯ ಮೂರು ಸಭೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ, ಅವರು ಪರಿಹಾರ ಪಡೆಯಲು ತೋರಿರುವ ಆಸಕ್ತಿಯನ್ನು ಗಮನಿಸಿದರೆ ಅವರ ಆಕ್ಷೇಪಣೆ ಒಪ್ಪಲಾಗದು. ಅಂತೆಯೇ, ರಾಜ್ಯ ಹೈಕೋರ್ಟ್‌ನಲ್ಲಿಯೂ ಇಂತಹ ಪ್ರಕರಣಗಳಲ್ಲಿ 1991ರಿಂದ ಈ ಪೂರ್ವನಿದರ್ಶನ ಪಾಲಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ಹೇಳಿದೆ.