ಬೆಂಗಳೂರು:ನಗರದ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್) ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯಪೀಠದ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ರೇಸ್ ಕೋರ್ಸ್‌ನಲ್ಲಿ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡುವುದಕ್ಕೆ ಅನುಮತಿ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಯಿತು. ಸರ್ಕಾರವು ಮೇಲ್ಮನವಿಯಲ್ಲಿ ಕೋರಿರುವ ಅಂಶಗಳಲ್ಲಿ ಕುದುರೆ ಪಂದ್ಯಗಳ ಆಯೋಜಿಸದಂತೆ ಕೋರಿರುವುದಕ್ಕೆ ಬಲವಾದ ಕಾರಣಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಅಮಾನತ್ತಿಲ್ಲಿಟ್ಟಿರುವುದಾಗಿ ಪೀಠ ತಿಳಿಸಿದೆ.
ಅಲ್ಲದೇ, ಅರ್ಜಿ ವಿಚಾರಣೆ ಪೂರ್ಣಗೊಳಿಸುವವರೆಗೂ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್‌ಗಳ ಆಯೋಜನೆಗೆ ನಿರ್ಬಂಧ ವಿಧಿಸಲಾಗಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಲಾಗಿದೆ.
ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆದ ವೇಳೆ, ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಗಳ ನಡೆಸುವ ವೇಳೆ ಬುಕ್ಕಿಗಳು ದೊಡ್ಡಮಟ್ಟದ ಅವ್ಯವಹಾರ ನಡೆಸಿದ್ದಾರೆ. ಈ ಸಂಬಂಧ ಸಿಸಿಬಿ ನಡೆಸಿದ ದಾಳಿಯಲ್ಲಿ ಹಣ ಬೆಟ್ ಮಾಡುವವರಿಗೆ ಪೆನ್ಸಿಲ್‌ನಿಂದ ಬರೆದ ಟಿಕೆಟ್ ನೀಡುತ್ತಿದ್ದ ಕೋಟ್ಯಂತರ ರೂ.ಗಳ ಅವ್ಯವಹಾರ ಬೆಳಕಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ವಂಚನೆ ಮಾಡಲಾಗಿದೆ. ಅಲ್ಲದೆ, ಆಟೋ ಚಾಲಕರು ಸೇರಿದಂತೆ ಬಡ ಜನತೆ ತಾವು ದಿನಪೂರ್ತಿ ದುಡಿದ ಹಣವನ್ನು ಕುದುರೆ ಪಂದ್ಯಗಳಿಗೆ ವಿನಿಯೋಗಿಸುತ್ತಿದ್ದು, ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ಈ ನಿಟ್ಟಿನಲ್ಲಿ ಕುದುರೆ ಪಂದ್ಯಗಳಿಗೆ ಅನುಮತಿ ನೀಡಬಾರದು'' ಎಂದು ಕೋರಿದರು.
ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘದ ಪರ ವಕೀಲರು, ''ಕುದುರೆ ಪಂದ್ಯ ಒಂದು ಕ್ರೀಡೆಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಜಾಕಿಗಳು ಈಗಾಗಲೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಏಕಸದಸ್ಯಪೀಠ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಿದೆ. ಇದೀಗ ಸರ್ಕಾರ ಪಂದ್ಯಗಳ ಆಯೋಜನೆಗೆ ಅವಕಾಶ ನೀಡದಂತೆ ಕೋರಿದರೆ ಅದನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ತೊಂದರೆಯಾಗಲಿದೆ'' ಎಂದು ತಿಳಿಸಿದರು.