ಬೆಂಗಳೂರು:ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಥಳಿಸಿದ್ದಾರೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ನಗರದ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ಎಫ್‌ಐಆರ್ ರದ್ದು ಕೋರಿ ಇಡಿ ಉಪ ನಿರ್ದೇಶಕ ಮನೋಜ್ ಮಿಟ್ಟಲ್ ಮತ್ತು ಸಹಾಯಕ ನಿರ್ದೇಶಕ ಅಜಯ್ ಕುಮಾರ್ ವೈದ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯ ವಿಲ್ಸನ್ ಗಾರ್ಡನ್ ಪೊಲೀಸರ ತನಿಖೆಗೆ ತಡೆ ನೀಡಿದ್ದಲ್ಲದೇ ದೂರುದಾರ ವೈ.ಬಿ.ಅಶ್ವಥ್ ನಾರಾಯಣ್‌ಗೆ ನೋಟಿಸ್ ಜಾರಿಗೊಳಿಸಿತು. ವಿಚಾರಣೆ ವೇಳೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಮೂಲ ದೂರುದಾರರು ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಪ್ಲಾಸ್ಟಿಕ್ ಪೈಪ್ನಲ್ಲಿ ಹೊಡೆದಿದ್ದಾರೆಂದು ದೂರಿರುವುದು ಆಧಾರ ರಹಿತ ಆರೋಪವಾಗಿದೆ. ಈ ಆರೋಪ ಪುಷ್ಟೀಕರಿಸುವುದಕ್ಕೆ ಯಾವುದೇ ರೀತಿಯ ಪುರಾವೆಗಳನ್ನು ಒದಗಿಸಿಲ್ಲ. ಹಾಗಾಗಿ ಪೊಲೀಸರ ತನಿಖೆಗೆ ತಡೆ ನೀಡಬೇಕು ಎಂದು ಕೋರಿದ್ದರು.