ಬೆಂಗಳೂರು:ಮಗುವನ್ನು ಪೋಷಣೆ ಮಾಡಲು ಆರ್ಥಿಕವಾಗಿ ಸದೃಢವಾಗಿರದ, ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆಗೆ ಜನಿಸಿದ ಮಗುವನ್ನು ದತ್ತು ನೀಡಲು ಇದ್ದ ಕಾನೂನು ತೊಡಕುಗಳನ್ನು ಹೈಕೋರ್ಟ್ ನಿವಾರಿಸಿದೆ. ಅಲ್ಲದೆ, ಮಗು ಉಳ್ಳವರ ಮನೆಯನ್ನು ಸೇರಲು ಕೋರ್ಟ್ ನೆರವಾಗಿದೆ.
ಜೊತೆಗೆ, ದತ್ತು ನೀಡಲು ಮಗುವಿನ ತಂದೆಗೆ (ಬಯೊಲಾಜಿಕಲ್ ಫಾದರ್) ಒಪ್ಪಿಗೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ದತ್ತುಪತ್ರದ ನೋಂದಣಿಗೆ ನಿರಾಕರಿಸಿ ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶಿಸಿದೆ. ಮಗುವಿನ ತಂದೆಯ ಒಪ್ಪಿಗೆ ಪಡೆಯುವಂತೆ ತಾಯಿ, ಪೋಷಕರಿಗೆ ಸೂಚಿಸದೆ ದತ್ತು ಪತ್ರವನ್ನು ನೋಂದಣಿ ಮಾಡಬೇಕು ಎಂದು ಉಪನೋಂದಣಾಧಿಕಾರಿಗೆ ನಿರ್ದೇಶಿಸಿದೆ.
ನೋಂದಣಿ ನಂತರ ದತ್ತು ಪಡೆದ ದಂಪತಿ ಜಿಲ್ಲಾ ದಂಡಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಪ್ರಕರಣದ ಕುರಿತ ವರದಿಯನ್ನು ಬಾಲ ನ್ಯಾಯ ಕಾಯ್ದೆ ಸೆಕ್ಷನ್ 66 ಹೇಳುವಂತೆ ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಗೆ (ಸಿಎಆರ್‌ಎ) ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಉಪನೋಂದಣಾಧಿಕಾರಿಯ ಹಿಂಬರಹ ರದ್ದತಿಗೆ ಕೋರಿ ಮಗುವಿನ ತಾಯಿ (ಸಂತ್ರಸ್ತೆ) ಹಾಗೂ ದತ್ತು ಪಡೆಯಲು ಬಯಸಿರುವ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮಗುವಿನ ತಾಯಿ ಮತ್ತು ದತ್ತು ಪಡೆಯಲು ಬಂದಿರುವ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಬಾಲ ನ್ಯಾಯ ಕಾಯ್ದೆ 2015ರ ನಿಯಮಗಳು ಅನ್ವಯಿಸುತ್ತವೆ. ಅದರ ಪ್ರಕಾರ, ಮಗುವಿನ ಪೋಷಕರು ದತ್ತು ನೀಡುವ ಹಕ್ಕು ಹೊಂದಿರುತ್ತಾರೆ. ದತ್ತು ನಿಬಂಧನೆಗಳು-2017ರ ನಿಬಂಧನೆ 7(7) ಪ್ರಕಾರ ಅತ್ಯಾಚಾರದಂತಹ ಕೃತ್ಯದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಾಯಿ ಅಧಿಕಾರ/ಹಕ್ಕು ಹೊಂದಿರುತ್ತಾರೆ. ಅದರಲ್ಲೂ ತಾಯಿ ಅಪ್ರಾಪ್ತೆಯಾಗಿದ್ದರೆ ದತ್ತು ಪತ್ರಕ್ಕೆ ಪ್ರಾಪ್ತ ಸಾಕ್ಷಿಯೊಬ್ಬರು ಸಹಿ ಹಾಕಬೇಕು ಎಂದು ತಿಳಿಸಿದೆ.