ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಒತ್ತಾಯ ಮಾಡಿದ 60 ವರ್ಷದ ತಾಯಿಯನ್ನು ಕುಡಿದ ಮತ್ತಿನಲ್ಲಿ ಕಾಲಿನಿಂದ ಒದ್ದು ದೊಣ್ಣೆಯಿಂದ ಹೊಡೆಯುವ ಮೂಲಕ ಕೊಲೆಗೆ ಕಾರಣವಾಗಿದ್ದ ಆರೋಪಿಗೆ ಆರು ತಿಂಗಳ ಕಾಲ ಸ್ಥಳೀಯ ಶಾಲೆಯೊಂದರಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಮಡಿಕೇರಿ ತಾಲೂಕಿನ ಸಂಪಾಜೆಯ ಆರೋಪಿ ಅನಿಲ್ ಎಂಬುವರನ್ನು ಅಗತ್ಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲ್ಲೆಯಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಹತ್ತು ಸಾವಿರ ದಂಡ ವಿಧಿಸಿದೆ.
ಆರೋಪಿ ಕುಡಿದ ಅಮಲಿನಲ್ಲಿ ಕೃತ್ಯವೆಸಗಿದ್ದಾನೆ. ಆದರೆ, ತಾಯಿಯ ಮರಣಪೂರ್ವ ಹೇಳಿಕೆ ಹೊರತುಪಡಿಸಿ ಘಟನೆಗೆ ಯಾವುದೇ ನೇರ ಸಾಕ್ಷಿಗಳು ಇಲ್ಲ. ಅಲ್ಲದೇ, ಈಗಾಗಲೇ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಲಾಗುತ್ತಿದೆ ಎಂದು ಕೋರ್ಟ್ ತಿಳಿಸಿದೆ.
ಅಲ್ಲದೇ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಸಂಪಾಜೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ, ತೋಟಗಾರಿಕೆ ಮುಂತಾದ ಸಮಾಜ ಸೇವೆಗಳನ್ನು ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದೆ. 2017ರ ಮಾರ್ಚ್ ನಲ್ಲಿ ಕೊಡಗಿನ ವಿಚಾರಣಾ ನ್ಯಾಯಾಲಯ ಆರೋಪಿ ಅನಿಲ್ನನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ, ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.