ಬೆಂಗಳೂರು:ದೃಷ್ಟಿಹೀನ ವ್ಯಕ್ತಿಗಳಾಗಿದ್ದೂ ಶ್ರೇಷ್ಠ ಸಾಧನೆ ಮಾಡಿದ ಹೋಮರ್, ಹೆಲೆನ್ ಕೆಲ್ಲರ್ ಮತ್ತು ಲೂಯಿಸ್ ಬ್ರೈಲ್ ಅವರ ಜೀವನದಲ್ಲಿನ ಸಾಧನೆಯನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಶಿಕ್ಷಕರು ತಮ್ಮ ಕರ್ತವ್ಯ (ಸಮಾಜ ವಿಜ್ಞಾನ, ಭಾಷಾ ವಿಷಯ ಬೋಧನೆ) ನಿರ್ವಹಿಸುವುದಕ್ಕೆ ಅಂಧತ್ವ ಅಡ್ಡಿಯಾಗದು ಎಂದು ಅಭಿಪ್ರಾಯಪಟ್ಟಿದೆ.
ಸಂಪೂರ್ಣ (ಶೇ.100ರಷ್ಟು) ಅಂಧತ್ವಕ್ಕೆ ಗುರಿಯಾಗಿರುವ ಹೆಚ್.ಎನ್.ಲತಾ ಎಂಬವರಿಗೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಕೆಎಟಿ ಆದೇಶವನ್ನು ಎತ್ತಿ ಹಿಡಿದಿದೆ.
ಅಲ್ಲದೇ, ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ ಅಂಧರ ಉದಾಹರಣೆಗಳು ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿ.ಪೂ 900ರಲ್ಲಿ ಹೋಮರ್ ಮಹಾಕಾವ್ಯಗಳನ್ನು ರಚನೆ ಮಾಡಿದ್ದಾರೆ. ಲೂಯಿಸ್ ಬ್ರೈಲ್ ಅವರು ಅಂಧರಿಗಾಗಿಯೇ ಬ್ರೈಲ್ ಲಿಪಿಯನ್ನು ಆವಿಷ್ಕಾರ ಮಾಡಿದ್ದರು ಎಂಬ ಮಾಹಿತಿಯನ್ನು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ವಾದ ತಿರಸ್ಕರಿಸಿದ ನ್ಯಾಯಪೀಠ:ಜೊತೆಗೆ, ಸಾಮಾನ್ಯ ಶಿಕ್ಷಕರು ಮಾಡುವ ಕೆಲಸವನ್ನು ಸಂಪೂರ್ಣ ಅಂಧತ್ವ ಹೊಂದಿರುವ ವ್ಯಕ್ತಿಗಳು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಪದವೀಧರರ ಪ್ರಾಥಮಿಕ ಶಿಕ್ಷಕರ (ಸಮಾಜ ವಿಜ್ಞಾನ, ಭಾಷಾ ವಿಷಯ ಬೋಧನೆ) ಹುದ್ದೆಗೆ ಕಡಿಮೆ ದೃಷ್ಟಿ ದೋಷವುಳ್ಳವರೊಂದಿಗೆ ಅರ್ಜಿದಾರ ಲತಾ ಅವರನ್ನೂ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಅಂಧತ್ವ ಹೊಂದಿರುವವರು ಹಲವು ರೀತಿಯಲ್ಲಿ ಚುರುಕಾಗಿರಲಿದ್ದಾರೆ ಎಂದು ತಿಳಿಸಿರುವ ಪೀಠ, ಇತರರೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ, ದಿನನಿತ್ಯ ಎದುರಾಗುವ ಸಮಸ್ಯೆಗಳನ್ನು ನಿರ್ವಹಣೆ, ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವ ಕೌಶಲ್ಯ, ಬಲವಾದ ಆಲಿಸುವ ಶಕ್ತಿ, ಅತ್ಯುತ್ತಮ ಜ್ಞಾಪನಾ ಶಕ್ತಿ, ನೆನಪಿಟ್ಟುಕೊಳ್ಳುವ ಸಾಮರ್ಥ್ಯ, ಗುರಿ ಮುಟ್ಟುವಲ್ಲಿ ಬದ್ಧತೆ, ಶ್ರವಣ ಸ್ಪರ್ಶ ಮತ್ತು ವಾಸನೆಯನ್ನು ಕಂಡುಹಿಡಿಯುವ ಇಂದ್ರಿಯಗಳ ಚುರುಕುತನವನ್ನು ಹೊಂದಿರಲಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.