ಬೆಂಗಳೂರು:ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಎಲ್ಲಾ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುತ್ತಾರೆ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಆದೇಶ ಉಲ್ಲಂಘಿಸಿದ ಆರೋಪ ಸಂಬಂಧ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧದ ಖಾಸಗಿ ದೂರು ಮತ್ತು ಗದಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರು ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಶಾಸಕ ಯತ್ನಾಳ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
'ಚುನಾವಣಾ ಸಂಚಾರ ವಿಚಕ್ಷಣಾ ತಂಡದ ಅಧಿಕಾರಿ ದಾಖಲಿಸಿದ್ದ ಖಾಸಗಿ ದೂರು ಆಧರಿಸಿ ವಿಚಾರಣಾ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅಡಿ ಸರ್ಕಾರಿ ಅಧಿಕಾರಿಗಳು ಹೊರಡಿಸಿದ ಆದೇಶದ ಉಲ್ಲಂಘಿಸಿದ ಅಪರಾಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಹಾಗೆಯೇ, ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿದೆ. ಆದರೆ, ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 188 ಅನ್ವಯಿಸುವುದಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯ ಆದೇಶ ರದ್ದುಪಡಿಸಬೇಕು ಎಂದು ವಿಚಾರಣೆ ವೇಳೆ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ಕೋರಿದರು.