ಆನೇಕಲ್ (ಬೆಂಗಳೂರು) : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ 8 ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವ ದುರಂತ ಮಾಸುವ ಮುನ್ನವೇ ಆನೇಕಲ್ ತಾಲೂಕಿನಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಭಾರಿ ಅನಾಹುತ ಸಂಭವಿಸಿದೆ. ಕಿತ್ತಗಾನಹಳ್ಳಿ - ಚಂದಾಪುರ ಬಳಿಯ ಜಯನಗರ ಸುನಿಲ್ ಎಂಬುವರ ಬಾಡಿಗೆ ಮನೆಯಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸಿಡಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ.
ಬೊಮ್ಮಸಂದ್ರ ಪುರಸಭಾ ವ್ಯಾಪ್ತಿಯ ಮೊದಲ ಅಂತಸ್ತಿನ ಮಹಡಿಯಲ್ಲಿ ಈ ದುರ್ಘಟನೆ ನಡೆದಿದ್ದು ಇಬ್ಬರಿಗೆ ಮೈಕೈ ಸುಟ್ಟು ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೇರಳ ಮೂಲದ ಸುನಿಲ್ ಜೋಸೆಫ್ ಹಾಗು ತಮಿಳುನಾಡು ಮೂಲದ ವಿಷ್ಣು ಜಯರಾಮ್ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಈ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ವಾಟರ್ ಲೈನ್, ಕಿಟಕಿ, ಬಾಗಿಲುಗಳೆಲ್ಲ ಪೀಸ್ ಪೀಸ್ ಆಗಿವೆ. ಜೊತೆಗೆ ಸ್ಫೋಟದ ವೇಳೆ ಮನೆಯ ಗೋಡೆಗಳು ಕುಸಿದಿದ್ದು, ಮನೆ ಬಳಿಯ ವಾಹನಗಳು ಕೂಡ ಜಖಂ ಆಗಿವೆ.
ಈ ಘಟನೆಗೆ ಸಂಬಂಧಪಟ್ಟಂತೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಘಟನೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು, ಬೊಮ್ಮಸಂದ್ರ ಪುರಸಭೆ ಸಿಬ್ಬಂದಿ ಹಾಗು ಅಗ್ನಿಶಾಮಕ ದಳ ದೌಡಾಯಿಸಿದ್ದಾರೆ. ಕೂಡಲೇ ಇಬ್ಬರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು; ಸಾವಿನ ಸಂಖ್ಯೆ 8ಕ್ಕೇರಿಕೆ