ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಭಾರತ ಸಂಚಾರ ನಿಗಮ ನಿಯಮಿತದಲ್ಲಿ (ಬಿಎಸ್‌ಎನ್‌ಎಲ್) ಉದ್ಯೋಗದ ಅರ್ಹತೆ ಪಡೆದು ನಿವೃತ್ತರಾಗಿರುವ ವ್ಯಕ್ತಿಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಇಂದು ನಿರಾಕರಿಸಿತು. ಪ್ರಕರಣ ರದ್ದು ಕೋರಿ ಕಲಬುರಗಿಯ ಶ್ರೀಮಂತ್ ಎಂಬವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದ 'ಕಬ್ಬಲಿಗ' ಜಾತಿಯ ಅರ್ಜಿದಾರರು ಪರಿಶಿಷ್ಟ ಪಂಗಡದ (ಎಸ್‌ಟಿ) ಕೋಲಿ ಧೋರ್ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದು ಅದರಿಂದ ಲಾಭ ಮಾಡಿಕೊಂಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದೆ. ಅರ್ಜಿದಾರರು ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದು, ಅವರು ಸುಳ್ಳು ಮಾಹಿತಿ ನೀಡಿ 1978ರಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗ ಪಡೆದು ಅದರ ಲಾಭ ಮಾಡಿಕೊಂಡಿದ್ದಾರೆ. ಆದರೆ, ನಂತರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ)ಯು ಪ್ರಮಾಣ ಪತ್ರ ರದ್ದುಪಡಿಸಿದೆ. ಆದ್ದರಿಂದ, ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ. ರಾಜ್ಯ ಸರ್ಕಾರವನ್ನು ವಂಚಿಸಿರುವ ಹಾಗೂ ಎಸ್‌ಟಿ ಸಮುದಾಯಕ್ಕೆ ಸೇರಿದವರ ಹಕ್ಕು ಕಸಿದುಕೊಂಡಿರುವ ಆರೋಪ ಹೊತ್ತಿರುವ ಅರ್ಜಿದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆ ನಡೆಸಬೇಕಿದೆ. ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರರು ವಿಚಾರಣೆ ಎದುರಿಸಲೇಬೇಕಿದ್ದು, ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣ ಹಿನ್ನೆಲೆ:ಅರ್ಜಿದಾರರು ಮೂಲತಃ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಅವರು ಎಸ್‌ಟಿ ವರ್ಗಕ್ಕೆ ಸೇರಿದ ಕೋಲಿ ಧೋರ್ ಎಂಬ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದು ಕೇಂದ್ರ ಸರ್ಕಾರಿ ಒಡೆತನದ ಬಿಎಸ್‌ಎನ್‌ಎಲ್‌ನಲ್ಲಿ ಟೆಲಿಫೋನ್ ಆಪರೇಟರ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆ ಮೂಲಕ ಸರ್ಕಾರಕ್ಕೆ ವಂಚನೆ ಎಸಗಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಎಫ್‌ಐಆರ್ ಹೂಡಿದ್ದರು. ಬಳಿಕ ಅವರ ಜಾತಿ ಪ್ರಮಾಣಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ(ಡಿಸಿವಿಸಿ) ರದ್ದುಗೊಳಿಸಿತ್ತು.