ಬೆಂಗಳೂರು :ಮಂತ್ರಿ ಡೆವಲಪರ್ಸ್ ಮುಖ್ಯಸ್ಥ ಸುಶೀಲ್ ಮಂತ್ರಿ, ಪತ್ನಿ ಸ್ನೇಹಲ್ ಹಾಗೂ ಪುತ್ರ ಪ್ರತೀಕ್ ವಿರುದ್ಧದ ಹೊರಡಿಸಿದ್ದ ಲುಕ್‌ಔಟ್ ಸುತ್ತೋಲೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.
ಕೇಂದ್ರ ಗೃಹ ಇಲಾಖೆಯ ವಲಸೆ ವಿಭಾಗದ ಅಧಿಕಾರಿಗಳು ಹೊರಡಿಸಿರುವ ಲುಕ್‌ಔಟ್ ಸುತ್ತೋಲೆ ಪ್ರಶ್ನಿಸಿ ಉದ್ಯಮಿ ಸುಶೀಲ್ ಮಂತ್ರಿ, ಪತ್ನಿ ಸ್ನೇಹಲ್ ಮತ್ತು ಪುತ್ರ ಪ್ರತೀಕ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜತೆಗೆ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿದೆ. ಈ ಆದೇಶದಿಂದಾಗಿ ವಿದೇಶಿ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದ ಮಂತ್ರಿ ಕುಟುಂಬಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ.
ಮಂತ್ರಿ ಡವೆಲಪರ್ಸ್ ವಿರುದ್ಧ ಹಣ ಪಡೆದ ಬಳಿಕ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳಿಸದೇ ಮತ್ತು ಮನೆಗಳನ್ನು ಹಸ್ತಾಂತರಿಸದ ಹಿನ್ನೆಲೆಯಲ್ಲಿ ಮನೆಗಳ ಖರೀದಿಗಾಗಿ ಮುಂಗಡ ಪಾವತಿ ಮಾಡಿದ್ದ ಗ್ರಾಹಕರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರ ಮನವಿಯ ಮೇರೆಗೆ ಕೇಂದ್ರ ಗೃಹ ಇಲಾಖೆ ಅರ್ಜಿದಾರರ ವಿರುದ್ಧ ಲುಕ್ಔಟ್ ಸುತ್ತೋಲೆಯನ್ನು ಹೊರಡಿಸಿತ್ತು.