ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಅರ್ಹತೆ ಇದ್ದರೂ ವೈದ್ಯಕೀಯ ಸೀಟು ನೀಡದ ಕೆಇಎ: 10 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ನಿರ್ದೇಶನ - Compensation For Chess Player

ಅರ್ಹತೆಗೆ ತಕ್ಕಂತೆ ವೈದ್ಯಕೀಯ ಸೀಟು ನೀಡದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚೆಸ್‌ ಪಟುವಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ಮಾಡಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು:ಕ್ರೀಡಾ ಕೋಟಾದಡಿ ಅರ್ಹತೆ ಇದ್ದರೂ ವೈದ್ಯಕೀಯ ಸೀಟು ನೀಡದ ಕಾರಣಕ್ಕೆ ಅರ್ಜಿದಾರರಾದ ಅಂತಾರಾಷ್ಟ್ರೀಯ ಚೆಸ್‌ ಪಟು ಸಂಜನಾ ರಘುನಾಥ್‌ಗೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ಹೆಚ್‌ಎಸ್‌ಆರ್‌ ಬಡಾವಣೆ ನಿವಾಸಿ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು 2018ರಲ್ಲಿ ಏಷ್ಯಾ ಯುವ ಚೆಸ್‌ ಚಾಂಪಿಯನ್‌ಶಿಪ್​​ನಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ, ಅವರು ಕ್ರಿಡಾ ಕೋಟಾದ ಸೀಟು ಪಡೆಯುವ ಅರ್ಹತೆಗಳಲ್ಲಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಲಾಗಿದೆ. ನಿಯಮಗಳ ಪ್ರಕಾರ ಅದು ತಪ್ಪು ಮತ್ತು ಆ ವರ್ಗೀಕರಣ ಊರ್ಜಿತವಾಗದು. ವರ್ಗೀಕರಣ ಸಂಬಂಧ 2023ರ ಜೂ.23ರಂದು ಹೊರಡಿಸಿರುವ ಸುತ್ತೋಲೆ 2006ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್​ ಆದೇಶಿಸಿದೆ.

ಅರ್ಜಿದಾರರು ಪಿ-1 ಶ್ರೇಣಿಯ ಅಭ್ಯರ್ಥಿಯಾಗಿ ಪ್ರವೇಶ ಪಡೆಯಲು ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹಾಗಾಗಿ, ಅವರು 10 ಲಕ್ಷ ರೂ. ಪರಿಹಾರಕ್ಕೆ ಅರ್ಹರು, ಸರ್ಕಾರ 6 ವಾರಗಳಲ್ಲಿ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶನ ನೀಡಿದೆ.

ಅರ್ಜಿದಾರರಿಗೆ ಅದೇ ಶೈಕ್ಷಣಿಕ ವರ್ಷ ಅಥವಾ ಬೇರೆ ವರ್ಷದಲ್ಲಿ ಪ್ರವೇಶ ಕಲ್ಪಿಸಿಕೊಡಲು ಸಾಧ್ಯವಿಲ್ಲ. ಹಾಗಾಗಿ, ಅವರಿಗೆ ಪರಿಹಾರ ರೂಪದಲ್ಲಿ ಆಗಿರುವ ನಷ್ಟ ತುಂಬಿಕೊಡಬೇಕಿದೆ. ಜೊತೆಗೆ ಅರ್ಜಿದಾರರಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದ ಕಾರಣ ಅವರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್​ಮೆಂಟ್‌ ಕೋಟಾದಲ್ಲಿ ಸುಮಾರು 11 ಲಕ್ಷ ರೂ. ಹಣ ಪಾವತಿಸಿದ್ದಾರೆ. ಹಾಗಾಗಿ, ಅವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ''ಫಿಡೆ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅರ್ಜಿದಾರರು ಎಲ್ಲಾ ರೀತಿಯಲ್ಲಿ ಪಿ-1 ಶ್ರೇಣಿಗೆ ಅರ್ಹರಾಗಿದ್ದಾರೆ. ಆದರೆ ಕೆಇಎ ಕೆಲವೊಂದು ಆಕ್ಷೇಪಣೆ ಎತ್ತಿ ಅವರಿಗೆ ತಪ್ಪಾಗಿ ಪಿ-5 ಶ್ರೇಣಿ ನೀಡಿದ್ದರಿಂದ ಅವರು ಕ್ರೀಡಾ ಕೋಟಾದಡಿ ಸೀಟು ಪಡೆಯುವುದರಿಂದ ವಂಚಿತರಾಗಿದ್ದಾರೆ. ಹಾಗಾಗಿ, ಅವರಿಗೆ ಪರಿಹಾರ ದೊರಕಿಸಿಕೊಡಬೇಕು'' ಎಂದು ಹೇಳಿದ್ದರು.

ಅಲ್ಲದೆ, ಕ್ರೀಡಾ ಕೋಟಾ ಸಂಬಂಧ 2023ರ ಜೂನ್​ 23ರಂದು ಹೊರಡಿಸಿರುವ ಸುತ್ತೋಲೆ 2009ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ:ಹೆಸರಾಂತ ಚೆಸ್‌ ಆಟಗಾರ್ತಿಯಾದ ಸಂಜನಾ ರಘುನಾಥ್‌ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚೆಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದರು. 2019ರಲ್ಲಿ 13 ವರ್ಷದೊಳಗಿನ 32ನೇ ರಾಷ್ಟ್ರೀಯ ಬಾಲಕಿಯರ ಚೆಸ್‌ ಚಾಂಪಿಯನ್‌ಶಿಪ್‌, ಏಷ್ಯಾ ಯುವ ಚೆಸ್‌ ಚಾಂಪಿಯನ್‌ಶಿಪ್‌ ಹಾಗೂ ಕಾಮನ್​ವೆಲ್ತ್‌ ಚೆಸ್‌ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರು. ಆಖಿಲ ಭಾರತ ಚೆಸ್‌ ಫಡರೇಷನ್‌ನಲ್ಲಿ ಪದಕ ಜಯಸಿದ್ದರು. ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಅವರು 2022-23ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕಿಂಗ್‌ ಗಳಿಸಿದ್ದರು. ಆದರೆ, ಅವರ ಅರ್ಹತೆಗೆ ತಕ್ಕಂತೆ ಕೆಇಎ ಶ್ರೇಣಿ ನೀಡದ ಕಾರಣ, ಸೀಟು ವಂಚಿತರಾಗಿದ್ದು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ: ಎನ್‌ಐಎಗೆ ವಹಿಸಿದ್ದ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - Harsha Murder Case

ABOUT THE AUTHOR

...view details