ಕರ್ನಾಟಕ

karnataka

ETV Bharat / state

15 ವರ್ಷ ಅರೆಕಾಲಿಕ ಸೇವೆ ಸಲ್ಲಿಸಿದ್ದ ಉಪನ್ಯಾಸಕಿಯನ್ನು ಖಾಯಂಗೊಳಿಸಲು ಹೈಕೋರ್ಟ್ ಆದೇಶ - High Court

15 ವರ್ಷ ಅರೆಕಾಲಿಕ ಸೇವೆ ಸಲ್ಲಿಸಿದ್ದ ಉಪನ್ಯಾಸಕಿಯನ್ನು ಪೂರ್ಣ ಪ್ರಮಾಣದ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಆದೇಶಿಸಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 19, 2024, 9:24 PM IST

ಬೆಂಗಳೂರು: ಶಿಕ್ಷಕರು ರಾಷ್ಟ್ರದ ಭವಿಷ್ಯ ರೂಪಿಸುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸುಮಾರು ಹದಿನೈದು ವರ್ಷ ಅರೆಕಾಲಿಕವಾಗಿ ಸೇವೆ ಸಲ್ಲಿಸಿರುವ ಉಪನ್ಯಾಸಕಿಯನ್ನು ಖಾಯಂಗೊಳಿಸುವಂತೆ ಆದೇಶಿಸಿತು.

ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಹೆಚ್.ಎಸ್.ವಿಜಯಲಕ್ಷ್ಮೀ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ಅವರನ್ನು ಪೂರ್ಣ ಪ್ರಮಾಣದ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ಸೂಚಿಸಿದೆ.

ಮುಂದಿನ ಮೂರು ತಿಂಗಳಲ್ಲಿ ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕು. ಇಲ್ಲವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಉಪನ್ಯಾಸಕರನ್ನು ಖಾಯಂಗೊಳಿಸುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಎರಡನೇ ಜಾಗತಿಕ ಮಹಾಯುದ್ಧದ ವೇಳೆ ನಾಗರಿಕ ಸೇವೆಗಳ ಹಲವು ಸ್ಥರಗಳ ಅಧಿಕಾರಿಗಳ ವೇತನ ಕಡಿತಗೊಳಿಸಲಾಗಿತ್ತು. ಆದರೆ ಶಿಕ್ಷಕರ ವೇತನವನ್ನು ಕಡಿತಗೊಳಿಸಿರಲಿಲ್ಲ. ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ರಾಜ್ಯ ಸರ್ಕಾರ ತುಂಬಾ ಜಾಗರೂಕವಾಗಿರಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರು ಏಕ ಸದಸ್ಯಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಶಿವಶಂಕರ್ ಭಟ್ ಎಂಬವರ ಸೇವಾ ನಿವೃತ್ತಿಯಿಂದ ಹುದ್ದೆ ಖಾಲಿ ಇತ್ತು. ಆ ಹುದ್ದೆೆಗೆ ಅರ್ಜಿದಾರರು 1996ರ ಜೂ.1ರಂದು ಅರೆಕಾಲಿಕ ಹಿಂದಿ ಉಪನ್ಯಾಸಕರಾಗಿ ನೇಮಕಗೊಂಡಿದ್ದರು. ವಾರದಲ್ಲಿ 16 ಗಂಟೆ ಪಾಠ ಮಾಡುತ್ತಿದ್ದರು. ಆದರೆ ಏಕ ಸದಸ್ಯಪೀಠ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮ 2003 ಅನ್ನು ಸರಿಯಾಗಿ ಗ್ರಹಿಸದೆ ಅರ್ಜಿದಾರರನ್ನು ಪೂರ್ಣಕಾಲಿಕ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದೆ. ನಿಯಮ 3ರಂತೆ ಅಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರ ಸೇವೆಯನ್ನು ಅನುದಾನಿತ ಸಂಸ್ಥೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿಯ ಕುರಿತ ದಾಖಲೆಗಳನ್ನು ಪರಿಶೀಲಿಸಿದರೆ ಮೊಣಕೈ ಕೀಲುಗಳನ್ನು ಹೊಂದಿರದ ಕಬ್ಬಿಣದ ಜಾಕೆಟ್‌ನಂತೆ ನಿಯಮವನ್ನು ರೂಪಿಸಿರುವುದು ಕಂಡುಬಂದಿದೆ. ನ್ಯಾಯಾಲಯವು ಶಸ್ತ್ರಚಿಕಿತ್ಸಕನಂತೆ ವರ್ತಿಸಲು ಸಾಧ್ಯವಿಲ್ಲ. ನಿಯಮದ ಸಾರವೆಂದರೆ ಮಂಜೂರಾದ ಹುದ್ದೆ, ಅಲ್ಲಿ ನಿಗದಿತ ಖಾಲಿ ಹುದ್ದೆ ಮತ್ತು ಖಾಲಿ ಹುದ್ದಗೆ ಎದುರಾಗಿ ನೇಮಕಗೊಂಡ ಅಭ್ಯರ್ಥಿ ಇದ್ದಾರೆ. ಹಾಗಾಗಿ ಅನುದಾನ ನೀಡುವುದು ಸರ್ಕಾರಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿಷಯವಾಗಿರುವುದರಿಂದ ಈ ವಿಚಾರದಲ್ಲಿ ಸರ್ಕಾರವೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮೇಲ್ಮನವಿದಾರರ ಖಾಯಂ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶಲ್ಲಿ ತಿಳಿಸಿದೆ.

ಇದನ್ನೂ ಓದಿ:ಇನ್ವೆಸ್ಟ್ ಕರ್ನಾಟಕ 2022ಕ್ಕೆ 3ಡಿ ವಿಡಿಯೋ: ಬಾಕಿ ಮೊತ್ತ ಪಾವತಿಸಲು ಸೂಚಿಸಿದ್ದ ಆದೇಶ ರದ್ದು - High Court

ABOUT THE AUTHOR

...view details