ಕರ್ನಾಟಕ

karnataka

ETV Bharat / state

ಸಮಾಜ ಕಲ್ಯಾಣ ಇಲಾಖೆಯಡಿಯ ವಸತಿ ನಿಯಲಗಳಲ್ಲಿ ಸಿಬ್ಬಂದಿ ಕೊರತೆ: ಹಣಕಾಸು ಇಲಾಖೆಗೆ ಹೈಕೋರ್ಟ್​ ನೋಟಿಸ್ - HIGH COURT

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್​​ಗಳ ಕೊರತೆ ಇದ್ದು, ಹುದ್ದೆ ತುಂಬುವ ಸಂಬಂಧ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್​ ನೋಟಿಸ್ ನೀಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Oct 23, 2024, 10:19 AM IST

ಬೆಂಗಳೂರು:ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ-ಎಸ್ಟಿ) ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್​​ ಹುದ್ದೆ ತುಂಬುವ ವಿಚಾರ ಸಂಬಂಧ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

ರಾಜ್ಯದ ಎಸ್ಸಿ- ಎಸ್ಟಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿರುವ ಮತ್ತು ಈ ಹಾಸ್ಟೆಲ್‌ಗಳಲ್ಲಿ ವಾರ್ಡ್‌ನ್ ಹುದ್ದೆಗಳು ಖಾಲಿಯಿರುವ ಕುರಿತು ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ನ.14ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ರಾಜ್ಯದ ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳಲ್ಲಿ ವಾರ್ಡನ್​​ ಹುದ್ದೆಗಳ ಕೊರತೆ ಸಂಬಂಧ ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆಯಲ್ಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಸದ್ಯ ವರದಿ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಅಗತ್ಯ ನೆರವು ಕಲ್ಪಿಸಲು ನಿಯೋಜನೆಗೊಂಡಿರುವ ಅಮೈಕಸ್ ಕ್ಯೂರಿ ವಕೀಲ ನಿತಿನ್ ರಮೇಶ್, ಪ್ರಕರಣದಲ್ಲಿ ಮೊಟ್ಟ ಮೊದಲಿಗೆ ಹಾಸ್ಟೆಲ್‌ಗಳಲ್ಲಿ ಖಾಲಿಯಿರುವ ಹಿರಿಯ ಹಾಗೂ ಕಿರಿಯ ವಾರ್ಡ್‌ನ್‌ಗಳು ಭರ್ತಿಯಾಗಬೇಕಿದೆ. ಇಲ್ಲವಾದರೆ ಹಾಸ್ಟೆಲ್‌ಗಳಿಗೆ ಮೇಲ್ವಿಚಾರಕರೇ ಇಲ್ಲದಂತಾಗುತ್ತದೆ. ವಾರ್ಡ್‌ನ್‌ಗಳ ಭರ್ತಿ ಪ್ರಸ್ತಾವನೆ ರಾಜ್ಯ ಹಣಕಾಸು ಇಲಾಖೆ ಮುಂದೆ ಬಾಕಿಯಿದೆ. ರಾಜ್ಯದ ಹಲವು ನೀತಿ ಪ್ರಸ್ತಾವನೆಗಳು ಹಣಕಾಸು ಇಲಾಖೆ ಮುಂದೆ ನೆನೆಗುದಿಗೆ ಬಿದ್ದಿರುತ್ತವೆ. ಎಲ್ಲ ಹುದ್ದೆಗಳ ಭರ್ತಿಗೆ ಹಣಕಾಸು ಮಂಜೂರಾತಿ ಕುರಿತ ಆಕ್ಷೇಪಣೆಗಳು ಹಣಕಾಸು ಇಲಾಖೆ ಹಂತದಲ್ಲಿ ಎದುರಾಗುತ್ತವೆ ಎಂದು ವಿವರಿಸಿದರು.

ಅಲ್ಲದೇ, ಪ್ರಕರಣದಲ್ಲಿ ನೀತಿ ನಿರ್ಣಯದ ಜೊತೆಗೆ ಹಣಕಾಸು ನಿರ್ಣಯವೂ ಬಹಳ ಮುಖ್ಯ. ವಾರ್ಡನ್​​ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಅಗತ್ಯ ಸಹಕಾರ ಹಾಗೂ ಸಮನ್ವಯ ಸಾಧಿಸಲು ಅರ್ಜಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡುವುದು ಸೂಕ್ತ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ವಾದ ಪುರಸ್ಕರಿಸಿದ ಪೀಠ, ಅರ್ಜಿಯಲ್ಲಿ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ಸೇರ್ಪಡೆಗೊಳಿಸಲು ನಿರ್ದೇಶಿಸಿತು. ಜೊತೆಗೆ, ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಹಿರಿಯ ಹಾಗೂ ಕಿರಿಯ ವಾರ್ಡನ್​ ಹುದ್ದೆಗಳ ಕೊರತೆ ಬಗ್ಗೆ ಸರ್ಕಾರಿ ವಕೀಲರು ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಬಿಬಿಎಂಪಿಗೆ ಚುನಾವಣೆ ನಡೆಸುವುದು ಬೇಡ: ನಮ್ಮನ್ನೇ ಮೇಯರ್ ಮಾಡಲಿ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ

ABOUT THE AUTHOR

...view details