ಬೆಂಗಳೂರು:ನಮ್ಮ ಪೋಷಕರು ನನ್ನನ್ನು ಶಿಕ್ಷಕನನ್ನಾಗಿ ಮಾಡಲು ಪ್ರಯತ್ನಪಟ್ಟರು. ಆದರೆ, ಆಕಸ್ಮಿಕವಾಗಿ ಕಾನೂನು ಕ್ಷೇತ್ರಕ್ಕೆ ನನ್ನ ಪ್ರವೇಶ ವಾಯಿತು ಎಂದು ನಿವೃತ್ತಿ ಹೊಂದುತ್ತಿರುವ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಹೇಳಿದರು.
ರಾಜ್ಯ ವಕೀಲರ ಪರಿಷತ್ ವತಿಯಿಂದ ಶುಕ್ರವಾರ ಕೋರ್ಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕನಾಗಿ ಊರಿನಲ್ಲೇ ಉಳಿಯುವ ಮೂಲಕ ಕುಟುಂಬ ಮತ್ತು ಜಮೀನು ನೋಡಿಕೊಳ್ಳಬೇಕು ಎಂಬುದು ನನ್ನ ತಂದೆಯ ಬಯಕೆಯಾಗಿತ್ತು. ಆದರೆ, ಹಳ್ಳಿಯ ಕೃಷಿಕ ಹಿನ್ನೆಲೆಯ ಹುಡುಗ ಬೇರೇನೋ ಸಾಧನೆ ಮಾಡಲು ಪ್ರೇರಣೆ ನೀಡಿದವರು ನನ್ನ ತಾಯಿ. ನನ್ನ ಸಾಧನೆಯನ್ನು ಬೇರೆಯವರು ಮಾದರಿಯಾಗಿ ಪಡೆದು ತಮ್ಮ ಜೀವನದಲ್ಲಿ ಮುಂದುವರಿಯಬೇಕು ಎಂಬುದು ಅವರ ಆಸೆಯಾಗಿತ್ತು. ಇದಕ್ಕಾಗಿ ನಾನು ಎಲ್‌ಎಲ್‌ಬಿ ಕೋರ್ಸ್‌ಗೆ ಸೇರ್ಪಡೆಯಾದೆ ಎಂದು ತಿಳಿಸಿದರು.
ವಕೀಲನಾಗಿ ಶ್ರೀರಂಗಪಟ್ಟಣಕ್ಕೆ ವಲಸೆ ಹೋಗಿ, ನನ್ನ ಗುರು ಎಂ ಪುಟ್ಟೇಗೌಡ ಅವರ ಕಚೇರಿಯಲ್ಲಿ ವೃತ್ತಿ ಆರಂಭಿಸಿದೆ. ವಕೀಲಿಕೆ ಆರಂಭಿಸಿದರೂ ನ್ಯಾಯಮೂರ್ತಿಯಾಗುವ ಯಾವುದೇ ಯೋಚನೆ ಇರಲಿಲ್ಲ. ಗ್ರಾಮೀಣ ಭಾಗದ ವಕೀಲನಾಗಿ, ತಾಲೂಕು ಮಟ್ಟದಲ್ಲಿದ್ದೆ. ಹಿರಿಯರು, ತಾಯಿ - ಪತ್ನಿಯ ನೆರವಿನಿಂದ ಸಿವಿಲ್ ನ್ಯಾಯಾಧೀಶನಾಗಿ ನೇಮಕವಾಗಿ ಬಳಿಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಈಗ ನಿವೃತ್ತಿಯಾಗುತ್ತಿದ್ದೇನೆ. ಹಳ್ಳಿಯಿಂದ ಬಂದವನಾದ್ದರಿಂದ ನಾನು ಹೇಳುವ ರೀತಿಯು ಕಠಿಣ ಎನ್ನಿಸಿರಬಹುದು. ಆದರೆ, ಯಾರಿಗೂ ನೋಯಿಸುವ ಉದ್ದೇಶ ನನ್ನದಲ್ಲಎಂದರು.