ಕರ್ನಾಟಕ

karnataka

ETV Bharat / state

ಜೂನಿಯರ್ ಪವರ್ ಆಪರೇಟರ್, ಪವರ್ ಮ್ಯಾನ್ ನೇರ ನೇಮಕ ಪ್ರಶ್ನಿಸಿ ಅರ್ಜಿ: ಕೆಪಿಟಿಸಿಎಲ್‌ಗೆ ಹೈಕೋರ್ಟ್ ನೋಟಿಸ್ - KPTCL RECRUITMENT

ನೇಮಕಾತಿ ಪ್ರಕ್ರಿಯೆ ಸರ್ಕಾರ ಅಥವಾ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 13, 2025, 10:29 PM IST

ಬೆಂಗಳೂರು:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ದಲ್ಲಿನ ಜೂನಿಯರ್ ಪವರ್ ಆಪರೇಟರ್ ಹಾಗೂ ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ನೇರ ನೇಮಕಾತಿ ವಿಧಾನದ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಸಂಬಂಧ ಹೈಕೋರ್ಟ್ ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿದೆ.

ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಹಕ್ಕುಗಳಿಗೆ ಹೋರಾಟ ಮಾಡುವ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್(ರಿ) ಸಂಸ್ಥೆಯ ಅಧ್ಯಕ್ಷ ಆರ್. ಕಾಂತಾಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನೇಮಕಾತಿ ಪ್ರಕ್ರಿಯೆ ಸರ್ಕಾರ ಅಥವಾ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿತು. ಆದಾಗ್ಯೂ, ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ನೇಮಕಾತಿಗೆ ಯಾವ ಪ್ರಕ್ರಿಯೆ ಅಥವಾ ವಿಧಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ 411 ಜೂನಿಯರ್ ಸ್ಟೇಷನ್ ಆಪರೇಟರ್ ಹಾಗೂ 2,268 ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು 2024ರ ಅ.14ರಂದು ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಅನುಸರಿಸಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಪರೀಕ್ಷೆ ಇಲ್ಲದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ. ಈ ಅವಧಿಯ ಗರಿಷ್ಠ ಅಂಕ ಗಳಿಕೆ ಸರಾಸರಿ ಹಿಂದಿನ ವರ್ಷಗಳಿಗಿಂತ ದೊಡ್ಡ ಅಂತರದಲ್ಲಿ ಹೆಚ್ಚಾಗಿದೆ.
ಕೋವಿಡ್ ಅವಧಿಯಲ್ಲಿ ಶೇ.95ರಿಂದ 100 ಅಂಕ ಗಳಿಸಿದ 1.18ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಒಂದು ವೇಳೆ, ಎಸ್ಸೆಸ್ಸೆಎಲ್ಸಿಯಲ್ಲಿನ ಗರಿಷ್ಠ ಅಂಕಗಳ ಮಾನದಂಡ ಅನುಸರಿಸಿದರೆ ಕೋವಿಡ್ ಕಾಲದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಅದರ ಹಿಂದಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವಿಧಾನ ಅನುಸರಿಸಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಹೀಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಅಧಿಸೂಚನೆ ರದ್ದುಪಡಿಸಬೇಕು. ನೇಮಕಾತಿ ಪ್ರಕ್ರಿಯೆ ಮರು ಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಸುವ ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ ವಿದ್ಯುತ್ ನಿಗಮಗಳ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ಜಯಲಲಿತಾರ ಚಿನ್ನಾಭರಣ ಸೇರಿ ಎಲ್ಲ ವಸ್ತುಗಳನ್ನು ಸಂಬಂಧಿಕರಿಗೆ ಮರಳಿಸಲು ಹೈಕೋರ್ಟ್ ನಕಾರ

ಇದನ್ನೂ ಓದಿ: ಒಬ್ಬ ವ್ಯಕ್ತಿಯೇ ಆರ್‌ಟಿಐ ಅಡಿ ಸಲ್ಲಿಸಿದ್ದ 9 ಸಾವಿರಕ್ಕೂ ಹೆಚ್ಚು ಅರ್ಜಿ ವಜಾ; ₹9.6 ಲಕ್ಷ ಶುಲ್ಕ ಪಾವತಿಗೆ ಹೈಕೋರ್ಟ್​ ಆದೇಶ

ABOUT THE AUTHOR

...view details