ಬೆಂಗಳೂರು:ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಪಡೆದಿದ್ದ ಸಾಲವನ್ನು ಮರುಪಾವತಿಸದ ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೆ ಅಗತ್ಯ ಸಹಕಾರ ನೀಡಲು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ಸೂಚಿಸಿದೆ.
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ರೂ. ಸಾಲ ಮರುಪಾವತಿಸದೇ ವಂಚಿಸಿರುವ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ವಾದ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅರ್ಜಿದಾರರಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ. ಆದರೆ, ಅರ್ಜಿದಾರರು ಮಾತ್ರ ವಿಚಾರಣೆಗೆ ಹಾಜರಾಗುತ್ತಿಲ್ಲ. ಇದರಿಂದ ಪ್ರಕರಣದ ತನಿಖೆಗೆ ಮುಂದುವರೆಯದಂತಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು, ಸಿಐಡಿ ವಿಚಾರಣೆಗೆ ಹಾಜರಾಗಿ ತನಿಖೆ ಮುಂದುವರೆಯಲು ಸಹಕರಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಜೊತೆಗೆ, ಅರ್ಜಿದಾರರು ವಿಚಾರಣೆಗೆ ಹಾಜರಾದಲ್ಲಿ, ಅವರನ್ನು ಕೋರ್ಟ್ ಅನುಮತಿಯಿಲ್ಲದೇ ಬಂಧಿಸಬಾರದು ಎಂದು ಸಿಐಡಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:ಬೆಳಗಾವಿಯ ಗೋಕಾಕದಲ್ಲಿರುವ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್‌ನಲ್ಲಿ ಯಂತ್ರೋಪಕರಣ ಅಳವಡಿಕೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ 2011 ರಿಂದ 2017ರ ಅವಧಿಯಲ್ಲಿ 232.88 ಕೋಟಿ ರೂ. ಸಾಲ ಪಡೆಯಲಾಗಿತ್ತು. ಸಕಾಲಕ್ಕೆ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಅಸಲು ಹಾಗೂ ಬಡ್ಡಿ ಸೇರಿ 439.7 ಕೋಟಿ ರೂ. ಆಗಿದೆ. ಸಾಲ ಪಡೆಯುವ ವೇಳೆ ಸಕ್ಕರೆ ಕಾರ್ಖಾನೆಗೆ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಆದರೆ, ಸಾಲ ಬಾಕಿಯಿರುವ ಅವಧಿಯಲ್ಲೇ ರಮೇಶ್ ಜಾರಕಿಹೊಳಿ ನಿರ್ದೇಶಕರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಹುದ್ದೆಗಳಿಗೆ ಬೇರೆಯವರು ನೇಮಕಗೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಹಾಗೂ ಸಾಲ ಮರುಪಾವತಿಸದೆ ವಂಚಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ಬೆಂಗಳೂರಿನ ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿತ್ತು.
ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಸಿಐಡಿ ತನಿಖೆ ರದ್ದು ಕೋರಿ ರಮೇಶ್ ಜಾರಕಿಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ 2024ರ ಫೆಬ್ರವರಿ 9ರಂದು ವಿಚಾರಣೆಗೆ ಬಂದಿದ್ದಾಗ ಸಿಐಡಿಯ ಡಿವೈಎಸ್‌ಪಿ ಹಾಜರಾಗಿ, ರಮೇಶ್ ಜಾರಕಿಹೊಳಿ ಪುತ್ರನ ಮದುವೆ ಫೆಬ್ರವರಿ 27ರಂದು ನಡೆಯಲಿದೆ. ಅಲ್ಲಿಯವರೆಗೆ ಅವರ ವಿರುದ್ಧದ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.
ಇದನ್ನೂ ಓದಿ:ಪ್ರಚೋದನಕಾರಿ ಭಾಷಣ ಆರೋಪ: ಯತ್ನಾಳ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ