ಕರ್ನಾಟಕ

karnataka

ETV Bharat / state

ಮುಸ್ಲಿಂ ದಂಪತಿಗೆ ವಕ್ಫ್​ ಬೋರ್ಡ್​​ನಿಂದ ವಿವಾಹ ನೋಂದಣಿ ಪತ್ರ: ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - HIGH COURT

ಮುಸ್ಲಿಂ ದಂಪತಿಗೆ ವಕ್ಫ್​ ಬೋರ್ಡ್​​ನಿಂದ ವಿವಾಹ ನೋಂದಣಿ ಪತ್ರ ವಿತರಣೆ ಆದೇಶ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 15, 2024, 7:33 PM IST

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಗೆ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವ ಅಧಿಕಾರ ನೀಡಿರುವಂತಹ ನಿಯಮವನ್ನು ಎಲ್ಲಿಯೂ ಕೇಳಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರ ಯಾವ ಕಾನೂನಿನಡಿ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಿದೆ ಎಂಬ ಬಗ್ಗೆ ಉತ್ತರ ನೀಡಬೇಕು ಎಂದು ಸೂಚನೆ ನೀಡಿದೆ.

ಬೆಂಗಳೂರಿನ ಆಲಂ ಪಾಷಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ''ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು'' ಎಂದು ಮನವಿ ಮಾಡಿದರು. ಇದಕ್ಕೆ ಪೀಠ, ''ಮುಂದಿನ ವಿಚಾರಣೆ ವೇಳೆ ಸರ್ಕಾರ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬೇಕು'' ಎಂದು ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್​ 21ಕ್ಕೆ ಮುಂದೂಡಿತು.

ಅಲ್ಲದೆ, ವಕ್ಫ್​ ಕಾಯಿದೆಯಡಿ ಎಲ್ಲ ಮಂಡಳಿಗೆ ಮದುವೆ ನೋಂದಣಿ ಪ್ರಮಾಣಪತ್ರ ವಿತರಿಸುವಂತಹ ಅಧಿಕಾರವನ್ನು ನೀಡಬಹುದು ಎಂಬುದನ್ನು ಸಾಬೀತುಪಡಿಸುವಂತೆ ಪೀಠವು ಮೌಖಿಕವಾಗಿ ಸೂಚಿಸಿತು.

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್​ ಮತ್ತು ಹಜ್‌ ಇಲಾಖೆ 2023ರ ಸೆ.30ರಂದು ಆದೇಶ ಹೊರಡಿಸಿದ್ದು, ಅದರಂತೆ ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್​ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್​ ಕಾಯಿದೆ-1995ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರ್ಕಾರದ ಆದೇಶ ರದ್ದುಗೊಳಿಸಿದಂತೆ, ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರೆಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು'' ಎಂದು ಕೋರಿದ್ದರು.

ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್: ಸಿಬಿಐ ತನಿಖೆಗೆ ಪತ್ನಿ ಅರ್ಜಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್

ಇದಕ್ಕೆ ಸರ್ಕಾರದ ಪರ ವಕೀಲರು, ''ಮದುವೆ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರ ಮಾತ್ರ ವಕ್ಫ್​ ಮಂಡಳಿಗೆ ನೀಡಲಾಗಿದೆ. ಬೇರೆ ಯಾವ ಅಧಿಕಾರವನ್ನೂ ನೀಡಿಲ್ಲ'' ಎಂದು ಸಮಜಾಯಿಷಿ ನೀಡಲು ಮುಂದಾದರು. ಅದಕ್ಕೆ ನ್ಯಾಯಾಲಯ, ''ಮದುವೆ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ವಕ್ಫ್​ ಬೋರ್ಡ್‌ ಮಾಡಬೇಕಿಲ್ಲ'' ಎಂದು ತಿಳಿಸಿತ್ತು.

ಇದನ್ನೂ ಓದಿ:ತಮ್ಮ ಜಮೀನಿಗೆ ಓಡಾಡಲು ನುಗು ಅಭಯಾರಣ್ಯದ ದಾರಿ ಬಳಕೆಗೆ ಅನುಮತಿ ನೀಡಿ; ಸಚಿವ ಜಾರ್ಜ್​ ಪುತ್ರನಿಂದ ಹೈಕೋರ್ಟ್​ಗೆ​​ ಅರ್ಜಿ

ABOUT THE AUTHOR

...view details