ಮೈಸೂರು: 'ಚಾಮುಂಡಿ ಬೆಟ್ಟ ಅರಮನೆಯ ಖಾಸಗಿ ಆಸ್ತಿಯ ಪಟ್ಟಿಯಲ್ಲಿದ್ದು, ಅದು ಅರಮನೆ ಆಸ್ತಿ ಆದ್ದರಿಂದ ಚಾಮುಂಡಿ ಬೆಟ್ಟದ ಪ್ರಾಧಿಕಾರ ರಚನೆ ಸಂಬಂಧ ನಾವು ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದೆವು. ಕೋರ್ಟ್ ಪ್ರಾಧಿಕಾರ ರಚನೆಯ ವಿಚಾರದಲ್ಲಿ ತಡೆಯಾಜ್ಞೆ ನೀಡಿದೆ ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಸೋಮವಾರ ಅರಮನೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪ್ರಮೋದಾದೇವಿ ಒಡೆಯರ್, "ಚಾಮುಂಡಿ ಬೆಟ್ಟ, ರಾಜಮನೆತನದ ಖಾಸಗಿ ಆಸ್ತಿಯ ಪಟ್ಟಿಯಲ್ಲಿದ್ದು, ಇಲ್ಲಿ ರಾಜ್ಯ ಸರ್ಕಾರ ಚಾಮುಂಡೇಶ್ವರಿ ಪ್ರಾಧಿಕಾರ ಮಾಡಿರುವುದು ಸರಿಯಲ್ಲ ಎಂದು ದಾಖಲೆಗಳನ್ನು ಇಟ್ಟುಕೊಂಡು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೆವು. ಕೋರ್ಟ್ ನಮ್ಮ ದಾಖಲೆಗಳನ್ನು ಪರಿಶೀಲನೆ ನಡೆಸಿ, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ತಡೆಯಾಜ್ಞೆ ನೀಡಿದೆ".
"ಜತೆಗೆ ಹಿಂದೆ ಹೇಗೆ ಇತ್ತು ಅದೇ ರೀತಿ ಯಥಾಸ್ಥಿತಿ ಕಾಪಾಡುವಂತೆ ತಿಳಿಸಿದ್ದು, ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ. ಹಾಗೂ ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಯ ಸಂಬಂಧ ಹಿಂದೆ ರಾಜ ವಂಶಸ್ಥರು ತಮ್ಮ ಸಂಸ್ಥಾನವನ್ನು ಸರ್ಕಾರದ ಜತೆ ವಿಲೀನ ಮಾಡುವ ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ತಿಗಳ ಲಿಸ್ಟ್ನ್ನು ನೀಡಿದ್ದರು. ಅದೇ ರೀತಿ ಚಾಮುಂಡಿ ಬೆಟ್ಟವು ಸಹ ಖಾಸಗಿ ಆಸ್ತಿಯ ಪಟ್ಟಿಯಲ್ಲಿದ್ದು, ಆ ದಾಖಲಾತಿಗಳನ್ನು ಇಟ್ಟು ಕೋರ್ಟ್ಗೆ ಮನವಿ ಸಲ್ಲಿಸಿದ್ದೆವು".