ಬೆಂಗಳೂರು: ಹೈ ಸೆಕ್ಯೂರೆಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್‌ಎಸ್‌ಆರ್‌ಪಿ) ನಂಬರ್ ಫಲಕ ಅಳವಡಿಸದ ವಾಹನ ಸವಾರರ ವಿರುದ್ಧ ಜೂನ್ 12ರವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿದ್ಧಪಡಿಸುವ ಕಂಪೆನಿಗಳಲ್ಲಿ ಒಂದಾದ ಬಿಎನ್ಡಿ ಎನರ್ಜಿ ಲಿಮಿಟೆಡ್ ನಂಬರ್ ಫಲಕ ಅಳವಡಿಸಲು ವಿಧಿಸಿರುವ ದಿನಾಂಕವನ್ನು ಮೇ 31ರವರೆಗೆ ವಿಸ್ತರಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೋಬಿನ್ ಜೇಕಬ್, ಅರ್ಜಿ ವಿಚಾರಣೆ ಜೂನ್ 11ರಂದು ಪಟ್ಟಿಯಾಗಿದೆ. ಹೀಗಾಗಿ ಈ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಮನವಿ ಮಾಡಿದರು. ಈ ವೇಳೆ ನ್ಯಾಯಪೀಠ, ಅಲ್ಲಿಯವರೆಗೂ ಕಾಲಾವಕಾಶ ನೀಡಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು, ಜೂನ್ 12ರವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.