ಬೆಂಗಳೂರು:ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ 11 ವರ್ಷಗಳಿಂದ ಜೈಲಿನಲ್ಲಿರುವ ಕೈದಿಗೆ ಕೃಷಿ ಚಟುವಟಿಕೆ ನೋಡಿಕೊಳ್ಳಲು 90 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬುವರಿಗೆ ಹೈಕೋರ್ಟ್ ಪೆರೋಲ್ ನೀಡಿದೆ. ತನ್ನ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಪೆರೋಲ್ ನೀಡುವಂತೆ ಕೋರಿ ಚಂದ್ರ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಚಂದ್ರ 11 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ. ಪ್ರಕರಣದ ಸತ್ಯಾಂಶ ಪರಿಶೀಲಿಸಿದರೆ ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಅರ್ಜಿದಾರ ಮೇಲ್ನೋಟಕ್ಕೆ ಸಾಬೀತುಪಡಿಸಿದ್ದಾರೆ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಆತನನ್ನು 90 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಪೆರೋಲ್ ಅವಧಿಯಲ್ಲಿ ಚಂದ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಆತ ಪೆರೋಲ್ ಮುಗಿಸಿ, ಕಾರಾಗೃಹಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಆ ಷರತ್ತು ಉಲ್ಲಂಘಿಸಿದರೆ, ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ. ಚಂದ್ರ ಪ್ರತಿ ವಾರದ ಮೊದಲ ದಿನದಂದು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಅಲ್ಲದೆ, ಪೆರೋಲ್ ನೀಡಲು ನಿರಾಕರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ.23ರಂದು ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶಿಸಿದೆ.