ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಈ ಆದೇಶದಿಂದ ಗೌರಿ ಕೊಲೆ ಪ್ರಕರಣ 18 ಆರೋಪಿಗಳ ಪೈಕಿ 8 ಮಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಂತಾಗಿದೆ.
ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ಬೆಳಗಾವಿಯ ಭರತ್ ಜಯವಂತ್ ಕುರಾನೆ, 9ನೇ ಆರೋಪಿ ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಾಲೇಕರ್, 13ನೇ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸುಜಿತ್ ಕುಮಾರ್, 16ನೇ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನ ಶ್ರೀಕಾಂತ್ ಪಂಗಾರ್ಕರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಷರತ್ತುಗಳು :
- ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು.
- ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು.
- ಅರ್ಜಿದಾರರು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಇಂಥಹದ್ದೇ ಆರೋಪದಲ್ಲಿ ಮತ್ತೆ ಭಾಗಿಯಾಗುವಂತಿಲ್ಲ.
- ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ಅನುಮತಿಸದ ಹೊರತು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ಈ ಪೈಕಿ ಯಾವುದೇ ಷರತ್ತು ಉಲ್ಲಂಘಿಸಿದರೂ ಪ್ರಾಸಿಕ್ಯೂಷನ್ ಜಾಮೀನು ರದ್ದತಿಗೆ ಕೋರಬಹುದು ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯದ ಆದೇಶದಲ್ಲೇನಿದೆ: ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರು ಇರಲಿಲ್ಲ. ಎರಡನೇ ಆರೋಪಿ ಪರಶುರಾಮ್ ವಾಘ್ಮೋರೆ ಮತ್ತು 3ನೇ ಆರೋಪಿ ಗಣೇಶ್ ಮಿಸ್ಕಿನ್ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.
ಉಳಿದವರ ಜೊತೆ ಸೇರಿ ಕೊಲೆಗೆ ವಾಹನ, ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿ ಮೂಲಕ ಪಿತೂರಿ ನಡೆಸಿರುವ ಆರೋಪ ಅರ್ಜಿದಾರರ ವಿರುದ್ಧವಿದೆ. ಇದೇ ಆರೋಪ ಈಚೆಗೆ ಜಾಮೀನು ಪಡೆದಿದ್ದ ಅಮಿತ್ ದಿಗ್ವೇಕರ್, ಹೆಚ್.ಎಲ್.ಸುರೇಶ್, ಎನ್.ಮೋಹನ್ ನಾಯಕ್ ಮತ್ತು ಕೆ.ಟಿ.ನವೀನ್ ಕುಮಾರ್ ವಿರುದ್ಧವಿತ್ತು. ಅವರಲ್ಲಿ ಮೋಹನ್ ನಾಯಕ್‌ಗೆ ಮೊದಲಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರ ವಿರುದ್ಧದ ಆರೋಪವೇನು?:ಆರೋಪಿಗಳಾದ ಭರತ್ ವಿರುದ್ಧ ಪರಶುರಾಮ್ ವಾಘ್ಮೋರೆ ಮತ್ತು ಗಣೇಶ್ ಮಿಸ್ಕಿನ್‌ಗೆ ಅಗತ್ಯವಿರುವ ವ್ಯವಸ್ಥೆ ಮಾಡಿದ ಆರೋಪವಿದೆ. ಆರೋಪಿಗಳಿಗೆ ಸುಧನ್ವ ವಾಹನ ವ್ಯವಸ್ಥೆ ಮಾಡಿದ್ದು, ಶಸ್ತ್ರಾಸ್ತ್ರ ಪೂರೈಕೆಗೆ ನೆರವಾಗಿದ್ದ ಎಂದು ಆರೋಪಿಸಲಾಗಿದೆ. ಆರೋಪಿ ಶ್ರೀಕಾಂತ್ ಪಂಗಾರ್ಕರ್ ಎಂಬಾತ ತರಬೇತಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದು, 10ನೇ ಆರೋಪಿ ಶರದ್ ಕಲಸ್ಕರ್ ಅಲಿಯಾಸ್ ಚೋಟುಗೆ ಶಸ್ತ್ರಾಸ್ತ್ರ ತಲುಪಿಸಿದ್ದ ಆರೋಪವಿದೆ. 1ನೇ ಆರೋಪಿ ಅಮೋಲ್ ಕಾಳೆ ಮತ್ತು 14ನೇ ಆರೋಪಿ ಮನೋಜ್ ಜೊತೆಗೆ ಸೇರಿ ಬೆಳಗಾವಿಯ ಸ್ವೀಕಾರ್ ಹೋಟೆಲ್‌ನಲ್ಲಿ ಅಪರಾಧಕ್ಕೆ ಪಿತೂರಿ, ಮನೋಹರ್ ಜೊತೆಗೆ ಆದಿಚುಂಚನಗಿರಿ ಮಠದ ಪಾರ್ಕ್ ಸಮೀಪ ಪಿತೂರಿ ಹಾಗೂ ಸುಜಿತ್ ಕಸ್ಟಡಿಯಲ್ಲಿದ್ದಾಗ ದಾವಣಗೆರೆಯ ಆತನ ಅಜ್ಜಿಯ ಮನೆಯಲ್ಲಿ ಎರಡು ಜೀವಂತ ಬುಲೆಟ್ ವಶಕ್ಕೆ ಪಡೆಯಲಾಗಿತ್ತು. 12ನೇ ಆರೋಪಿ ವಾಸುದೇವ್ ಭಗವಾನ್ ಸೂರ್ಯವಂಶಿ ಜೊತೆಗೂಡಿ ದಾವಣಗೆರೆಯಲ್ಲಿ ಹೀರೊ ಹೋಂಡಾ ಪ್ಯಾಷನ್ ಪ್ರೊ ಬೈಕ್ ಕದ್ದ ಆರೋಪ ಸುಜಿತ್ ಮೇಲಿತ್ತು.
ಇದನ್ನೂ ಓದಿ: ಶರಣ್ ಪಂಪ್ವೆಲ್ಗೆ ಸವಾಲು ಆರೋಪ: ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ - FIR