ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ಕೇರಳದ ಮೂವರು ಆರೋಪಿಗಳು ಭಾಗಿಯಾಗಿದ್ದ ಜಿಂಕೆ ಬೇಟೆ ಪ್ರಕರಣದ ವಿಚಾರಣೆ 16 ವರ್ಷವಾದರೂ ಪೂರ್ಣಗೊಳಿಸದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮುಂದಿನ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಕೇರಳದ ಅಬ್ದುಲ್ ರೆಹಮಾನ್, ಮೊಹಮ್ಮದ್ ಕುಟ್ಟಿ, ಅಬ್ದುಲ್ ಮಜೀದ್ ಎಂಬವರು ಗುಂಡ್ಲುಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿತು. ಇದೇ ವೇಳೆ, ವಿಚಾರಣಾ ನ್ಯಾಯಾಲಯ ಮುಂದಿನ ಮೂರು ತಿಂಗಳಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಆದೇಶ ನೀಡಬೇಕು. ಅರ್ಜಿದಾರರು ವಿಚಾರಣೆಗೆ ಸಹಕರಿಸಬೇಕು ಎಂದು ಪೀಠ ತಿಳಿಸಿದೆ.
ಪ್ರಕರಣ 2008ರಲ್ಲಿ ನಡೆದಿದೆ. ನಾವೀಗ 2024ರಲ್ಲಿದ್ದೇವೆ. ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಅರ್ಜಿದಾರರು ವಿಚಾರಣೆಗೆ ಹಾಜರಾಗುತ್ತಿಲ್ಲ. ಅರ್ಜಿದಾರರು ವಿಚಾರಣೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ಯಾವುದೇ ರಕ್ಷಣೆ ನೀಡಲಾಗದು ಎಂದು ಪೀಠ ತಿಳಿಸಿದೆ. ಅಲ್ಲದೆ, ಎರಡು ಕಡೆ ಪ್ರಕರಣ ದಾಖಲಾಗಿದೆ. ತೆಗೆದುಕೊಂಡು ಹೋದ ಮಾಂಸದ ತಿಂದಿದ್ದಾರಾ? ಜಿಂಕೆಯ ಮಾಂಸವೇ ಏಕೆ ಬೇಕಿತ್ತು? ಪ್ರಕರಣ ಯಾವ ಹಂತದಲ್ಲಿದೆ? ಎಂದು ಕೋರ್ಟ್ ಪ್ರಶ್ನಿಸಿತು.
ಜೊತೆಗೆ, 16 ವರ್ಷ ಸಮಯ ಏಕೆ ತೆಗೆದುಕೊಂಡಿದ್ದೀರಿ? ಇಷ್ಟು ದೀರ್ಘಾವಧಿ ಏಕೆ? ಒಂದು ತಿಂಗಳಲ್ಲೇ ಇತ್ಯರ್ಥ ಮಾಡಲು ಅಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಅರಣ್ಯ ಅಪರಾಧವನ್ನು ಇತ್ಯರ್ಥ ಮಾಡಲು 16 ವರ್ಷ ಏಕೆ ತೆಗೆದುಕೊಂಡಿರಿ? ಇದರಿಂದಾಗಿ ಆರೋಪಿಗಳು ಎದೆಯುಬ್ಬಿಸಿ ಓಡಾಡುತ್ತಾರೆ. ಯಾರನ್ನಾದರೂ ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕಾದರೆ, ಬೇಗ ಮಾಡಿ. 16 ವರ್ಷ ಒಂದು ಪ್ರಕರಣ ತಳ್ಳುತ್ತಾ ಕೂತರೆ ಹೇಗೆ? 2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿ 2024ರಲ್ಲಿ ಅದರ ವಿಚಾರಣೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯ್ತೀರಿ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, "ಅರ್ಜಿದಾರರ ವಿರುದ್ಧ ಘೋಷಿತ ಅಪರಾಧಿ (ಪ್ರೊಕ್ಲಮೇಶನ್) ಎಂದು ಹೊರಡಿಸಲಾಗಿದೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ವಿಚಾರಣೆಗೆ ಹಾಜರಾಗಲಾಗಲು ಸಿದ್ಧರಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.