ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ರಾಮನಗರ ತಾಲೂಕು ಕೊಡಿಯಾಲ ಕಾರೇನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಬೆಂಗಳೂರಿನಲ್ಲಿ ಅಭಿವೃದ್ಧಿ ವರ್ಗಾವಣೆ ಹಕ್ಕು (ಟಿಡಿಆರ್) ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಬಿಬಿಎಂಪಿಯ ಮಾಜಿ ಸದಸ್ಯ ಎನ್.ಆರ್.ರಮೇಶ್ ಸಲ್ಲಿಸಿದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ 10 ಸಾವಿರ ರೂ. ದಂಡ ವಿಧಿಸಿದೆ.
ಅರ್ಜಿಯಲ್ಲಿ ವಿಚಾರಣೆಗೆ ಅರ್ಹವಾಗುವಂತಹ ಯಾವುದೇ ಅಂಶಗಳಿಲ್ಲ. ಮೇಲ್ನೋಟಕ್ಕೆ ಅರ್ಜಿದಾರರು ಮತ್ತು ಬಿಬಿಎಂಪಿ ಶಾಮೀಲಾಗಿ ಈ ಅರ್ಜಿ ಸಲ್ಲಿಸಿದಂತಿದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ, 2013ರಲ್ಲಿಯೇ ಟಿಡಿಆರ್ ನೀಡಲಾಗಿದೆ. ಆ ಜಾಗದಲ್ಲಿ ಸದ್ಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದೆ. ಅರ್ಜಿದಾರರು 2023ರಲ್ಲಿ ಅಂದರೆ 10 ವರ್ಷ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಿಳಂಬದ ಬಗ್ಗೆ ಅರ್ಜಿಯಲ್ಲೆಲ್ಲೂ ಒಂದಕ್ಷರದ ವಿವರಣೆಯನ್ನೂ ನೀಡಿಲ್ಲ ಎಂದು ಪೀಠ ಹೇಳಿದೆ.
ಬಿಬಿಎಂಪಿ ಪರ ವಕೀಲರು ಹಾಜರಾಗಿ ಒಂದು ರೀತಿಯಲ್ಲಿ ಅರ್ಜಿದಾರರ ನಿಲುವನ್ನು ಬೆಂಬಲಸುವಂತೆ ವಾದ ಮಂಡಿಸಿದ್ದಾರೆ. ಟಿಡಿಆರ್‌ಗೆ ಒಪ್ಪಿಗೆ ನೀಡಿರುವ ಸರ್ಕಾರದ ನಿರ್ಧಾರ ಸರಿ ಇಲ್ಲವೇ ಎಂಬ ಬಗ್ಗೆ ಪಾಲಿಕೆ ವಕೀಲರಲ್ಲಿ ಮಾಹಿತಿ ಇಲ್ಲ. ಸರ್ಕಾರಿ ವಕೀಲರು, ಅರ್ಜಿದಾರರು 2010-15 ರವರೆಗೆ ಪಾಲಿಕೆ ಸದಸ್ಯರಾಗಿದ್ದರು, ಆಡಳಿತ ಪಕ್ಷದ ನಾಯಕರಾಗಿದ್ದರು. ಆಗ ಅದನ್ನು ಪ್ರಶ್ನಿಸದ ಅವರು, ಇದೀಗ ಪ್ರಶ್ನಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಬಿಬಿಎಂಪಿ ಹಾಗೂ ಅರ್ಜಿದಾರರು ಸೇರಿ ಅರ್ಜಿ ಸಲ್ಲಿಸಿದಂತಿದೆ, ಇದೊಂದು ಸಂಶಯಾಸ್ಪದ ಅರ್ಜಿಯಂತಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಬಿಎಂಪಿ 2011ರ ಜು.8ರಂದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಭೂಮಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿತ್ತು. ಭೂಮಿ ನೀಡುವವರಿಗೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಅಭಿವೃದ್ಧಿ ವರ್ಗಾವಣೆ ಹಕ್ಕು ನೀಡಲಾಗುವುದು ಎಂದು ಹೇಳಿತ್ತು. ಅದರಂತೆ ಕೊಡಿಯಾಲ ಕಾರೇನಹಳ್ಳಿಯ ತಿಮ್ಮಯ್ಯ ಮತ್ತು ಟಿ.ಸಿ.ಮುನಿರಾಜು ಮತ್ತಿತರರು ತಮ್ಮ ಭೂಮಿಯನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲು ಒಪ್ಪಿದ್ದರು. ಭೂಮಿ ಬಿಬಿಎಂಪಿ ವ್ಯಾಪ್ತಿಯ ಹೊರಗೆ ಬರುವುದರಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಲು ಪಾಲಿಕೆ ಸರ್ಕಾರದ ಅನುಮತಿಯನ್ನು ಕೇಳಿತ್ತು. ಸರ್ಕಾರ ಅನುಮತಿ ನೀಡಿತ್ತು. ಪಾಲಿಕೆ ಭೂ ಸ್ವಾಧೀನ ಮಾಡಿಕೊಂಡವರಗೆ ಪರ್ಯಾಯ ಟಿಡಿಆರ್ ಅನ್ನು ವಿತರಣೆ ಮಾಡಿದೆ. ಆದು ನಿಯಮಬಾಹಿರವಾಗಿದೆ ಎಂದು ನ್ಯಾಯಪಿಠಕ್ಕೆ ವಿವರಿಸಿದರು.
ಅಲ್ಲದೆ, ಪಾಲಿಕೆ ತನ್ನ ವ್ಯಾಪ್ತಿಯ ಹೊರಗಿನ ಪ್ರದೇಶಕ್ಕೆ ಬೆಂಗಳೂರು ನಗರದೊಳಗಿನ ಟಿಡಿಆರ್ ವಿತರಣೆ ಮಾಡುವ ಮೂಲಕ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯಿದೆ 1961 (ಅಭಿವೃದ್ಧಿ ಹಕ್ಕು ವರ್ಗಾವಣೆ-ಟಿಡಿಆರ್) ನಿಯಮ 2016 ಅನ್ನು ಉಲ್ಲಂಘನೆ ಮಾಡಿದೆ. ಹಾಗಾಗಿ ಟಿಡಿಆರ್ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ:ಹಿಡಕಲ್ ಅಲ್ಲಮಪ್ರಭು ದೇವಾಲಯ ಪಾರಂಪರಿಕ ಸ್ಮಾರಕವೇ?: ಪರಿಶೀಲನೆಗೆ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ