ಬೆಂಗಳೂರು:ಪತಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿಲ್ಲದ ಕಾರಣ ನೀಡಿ, ಕಾನೂನುಬಾಹಿರವಾಗಿ ಪತ್ನಿಯ 90 ದಿನಗಳ ಹೆರಿಗೆ ಭತ್ಯೆ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಷ್ಟೂ ದಿನಗಳ ಭತ್ಯೆಯನ್ನು ಶೇಕಡಾ 8ರಷ್ಟು ಬಡ್ಡಿಯೊಂದಿಗೆ ಪಾವತಿಸಲು ಸೂಚನೆ ನೀಡಿದೆ.
ತಾನು ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರೂ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಕ್ರಮವನ್ನು ಪ್ರಶ್ನಿಸಿ 71 ವರ್ಷದ ನಿವೃತ್ತ ನೌಕರರಾಗಿರುವ ಎ.ಆಲಿಸ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೆ, 2013ರ ಮೇ 1ರಿಂದ ಅನ್ವಯವಾಗುವಂತೆ 90 ದಿನಗಳ ಭತ್ಯೆಯನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಜೊತೆಗೆ, ಅರ್ಜಿದಾರರು ಬೆಸ್ಕಾಂನ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ಹೊಸದಾಗಿ ಮನವಿ ಸಲ್ಲಿಸಿ, 90 ದಿನಗಳ ಭತ್ಯೆಯನ್ನು ಪಾವತಿಸುವಂತೆ ಕೋರಬಹುದು. ಅರ್ಜಿದಾರರ ಮನವಿಯನ್ನು ಸಲ್ಲಿಸಿದರೆ, ಸಂಬಂಧಪಟ್ಟ ಪ್ರಾಧಿಕಾರವು ಆದೇಶವನ್ನು ಪರಿಶೀಲಿಸಿ, ಭತ್ಯೆಯನ್ನು ಶೇ.8ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ.
ಸರ್ಕಾರಿ ನೌಕರರಾಗಿರುವವರಿಗೆ ಪತಿಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವನ್ನು ಪರಿಚಯಿಸುವ ಹಿಂದಿನ ಉದ್ದೇಶವು ಮಕ್ಕಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುವುದಾಗಿತ್ತು. ಆದರೆ, ರಜೆ ಮಂಜೂರಾದ 30 ವರ್ಷಗಳ ಬಳಿಕ ಪತಿಯು ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ, ನಿಯಮಗಳ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ, ಕಾನೂನುಬಾಹಿರವಾಗಿ ರಜೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೀಠ ತಿಳಿಸಿದೆ.