ನವದೆಹಲಿ: ಇಂದು ಮಹಾನ್ ತತ್ವಜ್ಞಾನಿ ಮತ್ತು ಯುವ ಐಕಾನ್ ಸ್ವಾಮಿ ವಿವೇಕಾನಂದ ಅವರ 163ನೇ ಜನ್ಮದಿನ. ಯುವಕರು ಮಾನಸಿಕ, ಬೌದ್ಧಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದ ಅವರ ಜನ್ಮದಿನವಾದ ಜನವರಿ 12 ಅನ್ನು ಪ್ರತಿ ವರ್ಷ 'ರಾಷ್ಟ್ರೀಯ ಯುವ ದಿನ'ವಾಗಿ ಸಂಭ್ರಮಿಸಲಾಗುತ್ತದೆ.
ಇಂದಿನ ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 3000 ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 30 ಲಕ್ಷಕ್ಕೂ ಅಧಿಕ ಯುವಕರು ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಅರ್ಹತೆ ಆಧರಿಸಿ ಬಹುಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ 3000 ಯುವ ನಾಯಕರನ್ನು ಆಯ್ಕೆ ಮಾಡಲಾಗಿದೆ.
ಸಾಂಪ್ರದಾಯಿಕ ರೀತಿಯಲ್ಲಿ ರಾಷ್ಟ್ರೀಯ ಯುವ ಉತ್ಸವವನ್ನು ಆಚರಿಸುವ 25 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿಯುವುದು ವಿಕಸಿತ್ ಭಾರತ್ ಯುವ ನಾಯಕರ ಸಂವಾದದ ಗುರಿಯಾಗಿದೆ. ಯಾವುದೇ ರಾಜಕೀಯ ಸಂಬಂಧಗಳಿಲ್ಲದೆ ಒಂದು ಲಕ್ಷ ಯುವಕರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಕಸಿತ್ ಭಾರತಕ್ಕಾಗಿ ಅವರ ಆಲೋಚನೆಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯುವಕರಿಗೆ ರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸಲು ಪ್ರಧಾನಿ ಮೋದಿ ಅವರ ಆಲೋಚನೆ ಇದಾಗಿದೆ.
ರಾಷ್ಟ್ರದ ಭವಿಷ್ಯದ ನಾಯಕರನ್ನು ಪ್ರೇರೇಪಿಸಲು, ಉತ್ತೇಜಿಸಲು ಹಾಗೂ ಸಬಲೀಕರಣಗೊಳಿಸಲು ಇಂದು ವಿನ್ಯಾಸಗೊಳಿಸಲಾದ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಭಾರತದ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಹತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಪ್ರತಿನಿಧಿಸುವ ಹತ್ತು ಪವರ್ ಪಾಯಿಂಟ್ ಪ್ರೆಸೆಂಟೇಷನ್ಗಳನ್ನು ಯುವಕರು ಪ್ರಸ್ತುತಪಡಿಸಲಿದ್ದಾರೆ. ಭಾರತದ ಕೆಲವು ಪ್ರಮುಖ ಸವಾಲುಗಳನ್ನು ಪರಿಹರಿಸಲು ಯುವ ನಾಯಕರು ಪ್ರಸ್ತಾಪಿಸಿದ ನವೀನ ವಿಚಾರಗಳು ಹಾಗೂ ಪರಿಹಾರಗಳನ್ನು ಈ ಪ್ರೆಸೆಂಟೇಷನ್ ಒಳಗೊಂಡಿರುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಪ್ರಧಾನಿ ಎಕ್ಸ್ ಪೋಸ್ಟ್: ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಧಾನಿ ಮೋದಿ, "ಭಾರತದ ಯುವ ಶಕ್ತಿಗೆ ಗೌರವ! ಜನವರಿ 12, ಸ್ವಾಮಿ ವಿವೇಕಾನಂದರ ಜಯಂತಿಯಾಗಿರುವುದರಿಂದ ಇದು ಬಹಳ ವಿಶೇಷವಾದ ದಿನವಾಗಿದೆ. ಈ ಸಂದರ್ಭದಲ್ಲಿ ನಾನು ಇಡೀ ದಿನವನ್ನು ನನ್ನ ಯುವ ಸ್ನೇಹಿತರೊಂದಿಗೆ ವಿಕಸಿತ್ ಭಾರತದ ಯುವ ನಾಯಕರ ಸಂವಾದ 2025ರಲ್ಲಿ ಕಳೆಯುತ್ತೇನೆ. ಸಂಭಾಷಣೆ ಹಾಗೂ ಊಟದ ಸಮಯದಲ್ಲಿ ನಾವು ವಿಕಸಿತ್ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ವಿವಿಧ ವಿಷಯಗಳನ್ನು ಚರ್ಚಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಈ ದಿನ ಪ್ರತಿಯೊಬ್ಬ ಭಾರತೀಯ ಯುವಕರಿಗೂ ಮಹಾನ್ ಸ್ಫೂರ್ತಿಯ ದಿನವಾಗಿದೆ. ಇದು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವ ದಿನವಾಗಿದೆ. ಈ ದಿನ ವಿವೇಕಾನಂದ ಅವರ ರೂಪದಲ್ಲಿ ಒಂದು ಉತ್ಸಾಹಭರಿತ ಚಿಲುಮೆಯನ್ನು ಭಾರತ ಪಡೆದಿತ್ತು. ಆ ಚಿಲುಮೆಯನ್ನು ಇನ್ನೂ ನಮ್ಮ ದೇಶ ಚೈತನ್ಯಗೊಳಿಸುತ್ತಿದೆ. ಅದು ನಮಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿದೆ. ಮುಂದಿನ ದಾರಿಯನ್ನು ತೋರಿಸುತ್ತಿದೆ" ಎಂದು ಈ ಹಿಂದೆ ಪ್ರಧಾನಿ ಮೋದಿ ರಾಷ್ಟ್ರೀಯ ಯುವ ದಿನದಂದು ಹೇಳಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ PIB ಇಂಡಿಯಾ, "ಯುವ ಶಕ್ತಿಯನ್ನು ಆಚರಿಸುವ ಸಲುವಾಗಿ ರಾಷ್ಟ್ರೀಯ ಯುವ ದಿನ 2025 ಅನ್ನು ಆಚರಿಸಲಾಗುತ್ತಿದೆ. ರಾಷ್ಟ್ರೀಯ ಯುವ ದಿನ ಅಥವಾ ರಾಷ್ಟ್ರೀಯ ಯುವ ದಿವಸ್ ಅನ್ನು ಪ್ರತಿ ವರ್ಷ ಜನವರಿ 12ರಂದು ಮಹಾನ್ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದ ಅವರ ಸ್ಮರಣಾರ್ಥ ಆಚರಿಸಲಾಗುತ್ತದೆ" ಎಂದು ಹೇಳಿದೆ.
ಮೈಗವ್ ತ್ರಿಪುರಾ (MyGov Tripura) ಎಕ್ಸ್ನಲ್ಲಿ, "ದಿನಕ್ಕೊಮ್ಮೆ ನಿಮ್ಮೊಂದಿಗೆ ಮಾತನಾಡಿ, ಇಲ್ಲದಿದ್ದರೆ ನೀವು ಈ ಜಗತ್ತಿನಲ್ಲಿ ಒಬ್ಬ ಬುದ್ಧಿವಂತ ವ್ಯಕ್ತಿಯನ್ನು ಭೇಟಿಯಾಗುವುದನ್ನು ಕಳೆದುಕೊಳ್ಳಬಹುದು - ಸ್ವಾಮಿ ವಿವೇಕಾನಂದ" ಎಂದು ಸ್ವಾಮಿ ವಿವೇಕಾನಂದ ಅವರ ಮಾತನ್ನು ಪೋಸ್ಟ್ ಮಾಡಿದೆ.
ರಾಷ್ಟ್ರೀಯ ಯುವ ದಿನದ ಇತಿಹಾಸ: ಭಾರತದ ಮಹಾನ್ ತತ್ವಜ್ಞಾನಿ, ಚಿಂತಕ ಮತ್ತು ಯುವಕರ ಶ್ರೇಷ್ಠ ನಾಯಕ ಸ್ವಾಮಿ ವಿವೇಕಾನಂದ ಅವರು ಜನವರಿ 12, 1863ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಈ ದಿನವನ್ನು 1984ರಿಂದ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವಸಂಸ್ಥೆ 1984ರಲ್ಲಿ ಜ.12 ಅನ್ನು ಅಂತಾರಾಷ್ಟ್ರೀಯ ಯುವ ದಿನವನ್ನಾಗಿ ಘೋಷಣೆ ಮಾಡಿತ್ತು. ಮಾತ್ರವಲ್ಲಿ ಈ ದಿನದಿಂದ ಪ್ರಾರಂಭಗೊಂಡು ಒಂದು ವಾರವನ್ನು ಅಂತಾರಾಷ್ಟ್ರೀಯ ಯುವ ವಾರವಾಗಿಯೂ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದಿಂದ ಆಚರಿಸಲಾಗುತ್ತದೆ.
ಈ ದಿನದ ಮಹತ್ವ: ರಾಷ್ಟ್ರೀಯ ಯುವ ದಿನಾಚರಣೆ ಮೂಲಕ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆ ಕಲ್ಪಿಸಿದಂತಾಗುತ್ತದೆ. ವಿವಿಧ ಚಟುವಟಿಕೆಗಳ ಮೂಲಕ ಯುವಕರು ಒಟ್ಟುಗೂಡಲು ಸಹಾಯವಾಗುತ್ತದೆ. ಅಲ್ಲಿ ಅವರು ಔಪಚಾರಿಕ ಮತ್ತು ಅನೌಪಚಾರಿಕ ಸಂವಹನ ನಡೆಸುತ್ತಾರೆ. ಮತ್ತು ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ವಿನಿಮಯವಾಗುತ್ತದೆ.
ರಾಷ್ಟ್ರೀಯ ಯುವ ಉತ್ಸವ: ಮೊದಲ ರಾಷ್ಟ್ರೀಯ ಯುವ ಉತ್ಸವವನ್ನು 1995ರಲ್ಲಿ ಭೋಪಾಲ್‌ನಲ್ಲಿ ರಾಷ್ಟ್ರೀಯ ಏಕೀಕರಣ ಶಿಬಿರದ ಕಾರ್ಯಕ್ರಮದ ಅಡಿಯಲ್ಲಿ ಪ್ರಮುಖ ಚಟುವಟಿಕೆಯಾಗಿ ನಡೆಸಲಾಯಿತು.
ಇದನ್ನೂ ಓದಿ: ಯುವಜನೋತ್ಸವಕ್ಕೆ ಆಗಮಿಸಿದ ಯುವ ಮನಸುಗಳಿಗೆ ರಾಫ್ಟಿಂಗ್, ಬೋಟಿಂಗ್ ತರಬೇತಿ