ಚಾಮರಾಜನಗರ: ಕಬ್ಬು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಹಾವೊಂದು ಕಚ್ಚಿ ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬವರ ಪುತ್ರ ಅಜಯ್ (2) ಹಾವು ಕಚ್ಚಿ ಮೃತಪಟ್ಟಿರುವ ಬಾಲಕ. ಶ್ರೀಧರ್ ಕುಟುಂಬಸ್ಥರು ಪ್ರತಿವರ್ಷ ತಮ್ಮ ಜಿಲ್ಲೆಯಿಂದ ಕಬ್ಬು ಕಟಾವು ಮಾಡಲು ಎರಡು ಮೂರು ತಿಂಗಳುಗಳ ಕಾಲ ಕುಟುಂಬ ಸಮೇತರಾಗಿ ಬಂದು ಇಲ್ಲೇ ವಾಸ್ತವ್ಯ ಹೂಡಿ, ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಸುಮಾರು ನಾಲ್ಕೈದು ಕುಟುಂಬದವರು ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಕುಳ್ಳೇಗೌಡ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು. ಈ ವೇಳೆ ಮೃತಪಟ್ಟ ಮಗು ಸೇರಿ 4-5 ಮಕ್ಕಳು ಕಬ್ಬಿನ ಗದ್ದೆಯಲ್ಲೇ ಆಟವಾಡುತ್ತಿದ್ದರು.
ಈ ಸಂದರ್ಭದಲ್ಲಿ ಹಾವೊಂದು ಕಚ್ಚಿದ ತಕ್ಷಣವೇ ಮಗು ಜೋರಾಗಿ ಕಿರುಚಾಡಿಕೊಂಡು ಒದ್ದಾಡಿದೆ. ನಂತರ ಅಲ್ಲಿಗೆ ಬಂದ ಪೋಷಕರು ಹಾವನ್ನು ನೋಡಿದ್ದಾರೆ. ತಕ್ಷಣ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಾಮಗೆರೆ ಗ್ರಾಮದ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಾಸನ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ - SNAKE BITE CASE