ಬೆಂಗಳೂರು :ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾರ್ವಜನಿಕರಿಂದ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮುಂದಾಗುವುದಕ್ಕೂ ಮುನ್ನ ಎಷ್ಟು ಪ್ರಮಾಣದ ಜಮೀನು ಕೈಗಾರಿಕಾ ಸ್ಥಾಪನೆಗೆ ಅಗತ್ಯವಿದೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿ 14 ವರ್ಷ ಕಳೆದರೂ ಅಂತಿಮ ಅಧಿಸೂಚನೆ ಪ್ರಕಟಿಸದ ಕೆಐಎಡಿಬಿ ಕ್ರಮ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಕೊಂಡಾರೆಡ್ಡಿ ಪಾಳ್ಯ ಗ್ರಾಮದ ನಿವಾಸಿ ಎಚ್.ಎಸ್. ಅಬ್ದುಲ್ ರಿಯಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಹಲವು ಸಂದರ್ಭದಲ್ಲಿ ಮಂಡಳಿ ತನ್ನ ಪ್ರಾಥಮಿಕ ಅಧಿಸೂಚನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿ, ಅಂತಿಮ ಅಧಿಸೂಚನೆ ಪ್ರಕಟಿಸುವಾಗ ಪ್ರಸ್ತಾವಿತ ಪ್ರಮಾಣದ ಪೈಕಿ ಶೇ.50ಕ್ಕಿಂತ ಕಡಿಮೆ ಸ್ವಾಧೀನಪಡಿಸಿಕೊಳ್ಳುತ್ತದೆ. ಇದು ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗುವ ಮುನ್ನ ಕೆಐಎಡಿಬಿ ಸೂಕ್ತ ಅಧ್ಯಯನ ನಡೆಸದೇ ಇರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ರಾಜ್ಯದ ಸೂಕ್ತ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯ್ದೆ-1996ರನ್ನು ಸರ್ಕಾರ ಜಾರಿಗೆ ತಂದಿದೆ. ಈ ಉದ್ದೇಶ ಸಾಧಿಸಲು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಹಾಗೂ ಸೂಕ್ತವಾದ ಜಾಗ ಗುರುತಿಸುವುದು ಮತ್ತು ಒದಗಿಸುವುದು ಈ ಮಂಡಳಿಯ ಆದ್ಯ ಕರ್ತವ್ಯ ಎಂದು ಪೀಠ ತಿಳಿಸಿದೆ.
ಅಲ್ಲದೇ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಶರವೇಗದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳದೆ ಇರುವುದರಿಂದ ಪ್ರಾಥಮಿಕ ಅಧಿಸೂಚನೆಯಲ್ಲಿ ಅಧಿಸೂಚಿತವಾದ ಭೂಮಿಯ ಮಾಲೀಕರಿಗೆ ಅನಾನುಕೂಲವಾಗುತ್ತದೆ. ಇದು ಭೂಮಿಯ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವುದರಿಂದ ಭೂ ಮಾಲೀಕನನ್ನು ತಡೆದಂತಾಗುತ್ತದೆ. ಪ್ರಾಥಮಿಕ ಅಧಿಸೂಚನೆ ಅಂಗೀಕರಿಸುವುದರಿಂದ ಭೂಮಿ ಮಾಲೀಕರು ಬಯಸಿದಂತೆ ಜಮೀನುಗಳನ್ನು ಅಭಿವೃದ್ಧಿಪಡಿಸಲು ಅವರಿಗೆ ಅಡ್ಡಿಯಾಗುತ್ತದೆ. ಆ ಭೂಮಿಯನ್ನು ಖರೀದಿಸಲು ಖರೀದಿದಾರರು ಮುಂದೆ ಬರುವುದಿಲ್ಲ ಎಂದು ನ್ಯಾಯಾಲಯವು ಅತೃಪ್ತಿ ಹೊರಹಾಕಿದೆ.
ಪ್ರಸ್ತುತದ ಪ್ರಕರಣದಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 14 ವರ್ಷಗಳ ಕಳೆದಿವೆ. ಆದರೂ ಈವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ನಡೆದಿಲ್ಲ. ಹೀಗಾಗಿ, ಭೂ ಸ್ವಾಧೀನ ಪ್ರಕ್ರಿಯೆಗಳು ಮಾನ್ಯತೆ ಕಳೆದುಕೊಂಡಿದ್ದು, ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಲು ಅರ್ಹವಾಗಿದೆ. ಕಾಯ್ದೆಯಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸುವುದಕ್ಕೆ ಇರುವ ಕಾಲಮಿತಿ ಉಲ್ಲೇಖಿಸದಿದ್ದರೂ ಸೂಕ್ತವಾದ ಸಮಯದೊಳಗೆ ಅಂತಿಮ ಅಧಿಸೂಚನೆ ಪ್ರಕಟಿಸುವುದನ್ನು ಕೆಐಎಡಿಬಿ ಹಾಗೂ ಸಂಬಂಧಪಟ್ಟ ಇತರೆ ಸರ್ಕಾರಿ ಪ್ರಾಧಿಕಾರಗಳಿಂದ ನಿರೀಕ್ಷಿಸಲಾಗಿರುತ್ತದೆ.
ಆದರೆ, 14 ವರ್ಷಗಳನ್ನು ವಿಳಂಬವನ್ನು ಸಮಂಜಸ ಸಯಯವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಪ್ರಕರಣದಲ್ಲಿ ಭೂ ಸ್ವಾಧೀನಕ್ಕೆ ಹೊರಡಿಸಿದ ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಲಾಗುತ್ತಿದೆ. ಆದರೆ, ಇದು ಕಾನೂನು ಪ್ರಕಾರ ಹೊಸದಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದರಿಂದ ಕೆಐಎಡಿಬಿ ಹಾಗೂ ಇತರ ಪ್ರತಿವಾದಿಗಳನ್ನು ಪ್ರತಿಬಂಧಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರರಿಗೆ ಸೇರಿದ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಕಸಬ ಹೋಬಳಿಯ ಕೊಂಡಾರೆಡ್ಡಿ ಪಾಳ್ಯ ಗ್ರಾಮದ ಸರ್ವೇ ನಂಬರ್ 26ರ 2 ಎಕರೆ 27 ಗುಂಟೆ ಜಾಗವನ್ನು ಕೈಗಾರಿಕಾಭಿ ಪ್ರದೇಶಾವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ 2009ರ ಡಿ.11ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದಾಗಿ 14 ವರ್ಷ ಕಳೆದರೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಆದ್ದರಿಂದ ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ನಿಷ್ಪಕ್ಷಪಾತ ಚುನಾವಣೆಗೆ ಆಗ್ರಹಿಸಿ ಅರ್ಜಿ: ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್