ಬೆಂಗಳೂರು: ದೇಶದಲ್ಲಿರುವ ಕಾನೂನು ಕಾಲೇಜುಗಳ ಹೆಸರು, ಅವುಗಳ ಮಾನ್ಯತೆ ಮತ್ತಿತರ ವಿವರಗಳನ್ನು ಭಾರತೀಯ ವಕೀಲರ ಪರಿಷತ್(ಬಿಸಿಐ)ಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಿಎಂಎಸ್ ಕಾನೂನು ಕಾಲೇಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಭಾರತೀಯ ವಕೀಲರ ಪರಿಷತ್‌ಗೆ ಯಾವ ಯಾವ ಕಾನೂನು ಕಾಲೇಜುಗಳು ಯಾವ ದಿನಾಂಕದಲ್ಲಿ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದವು. ಅವುಗಳು ಶುಲ್ಕ ಯಾವಾಗ ಪಾವತಿಸಿದವು, ಯಾವಾಗ ಮಾನ್ಯತೆ ನವೀಕರಿಸಲಾಗಿದೆ ಎಂಬುದು ಸೇರಿದಂತೆ ಮತ್ತಿತರ ವಿವರಗಳನ್ನು ಪಿಡಿಎಫ್ ರೂಪದಲ್ಲಿ ಅಪ್‌ಲೋಡ್ ಮಾಡಬೇಕು. ಆನಂತರ ಎಷ್ಟು ಸೀಟುಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ, ಯಾವ ಅವಧಿಗೆ ಮಾನ್ಯತೆ ನೀಡಲಾಗಿದೆ ಎಂಬ ವಿವರಗಳನ್ನೂ ಸಹ ವೆಬ್ ಸೈಟ್ ನಲ್ಲಿ ತಿಳಿಸಬೇಕು ಎಂದು ಸೂಚಿಸಿದೆ.
ಕಾನೂನು ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರ ಬಿಸಿಐಗಿದೆ. ಅದು ತನ್ನ ವೆಬ್‌ಸೈಟ್‌ನಲ್ಲಿ ಸರಿಯಾದ ವಿವರಗಳನ್ನು ಪ್ರಕಟಿಸಬೇಕು. ಇಲ್ಲವಾದರೆ ಕಾಲೇಜುಗಳಲ್ಲಿ ಪ್ರವೇಶ ಮಾಡಿಕೊಳ್ಳಲು ಕಾನೂನು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹಾಗಾಗಿ ಅರ್ಜಿದಾರರ ಕಾಲೇಜಿನ ವಿವರಗಳನ್ನು 8 ವಾರಗಳಲ್ಲಿ ಬಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು ಎಂದು ನ್ಯಾಯಾಲಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.