ನವದೆಹಲಿ: 1961ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ರಿಟ್ ಅರ್ಜಿ ಸಲ್ಲಿಸಿದೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಪುನಃಸ್ಥಾಪಿಸಲು ಕೋರ್ಟ್ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದೆ.
ಜನರು ಮಾಡುವ ಮತದಾನದ ಪ್ರಕ್ರಿಯೆಯನ್ನು ದಾಖಲು ಮಾಡುವ ಸಿಸಿಟಿವಿ ಕ್ಯಾಮೆರಾ, ವೆಬ್ಕಾಸ್ಟಿಂಗ್ ಹಾಗೂ ಅಭ್ಯರ್ಥಿಗಳ ವಿಡಿಯೋ ರೆಕಾರ್ಡ್ಗಳಂತಹ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕ ತಪಾಸಣೆಗೆ ನೀಡುವುದನ್ನು ತಡೆಯಲು ಕೇಂದ್ರ ಸರ್ಕಾರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಕಾಂಗ್ರೆಸ್ ಆರೋಪವೇನು?: ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮಾತನಾಡಿ, "ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆಯಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ತನ್ನ ಮೂಗಿನ ನೇರಕ್ಕೆ ಬದಲಾವಣೆ ಮಾಡುತ್ತಿದೆ. ಈ ಹಿಂದಿನ ನಿಯಮಗಳನ್ನು ಪುನಃಸ್ಥಾಪಿಸಲು ಮತ್ತು ಮತದಾನದ ಪಾರದರ್ಶಕತೆಯನ್ನು ಕಾಪಾಡಲು ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.
"1961ರ ಚುನಾವಣಾ ನಿಯಮಗಳಿಗೆ ಕೇಂದ್ರ ಸರ್ಕಾರ ಇತ್ತೀಚಿಗೆ ತಿದ್ದುಪಡಿ ಮಾಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ" ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಏಕಪಕ್ಷೀಯವಾಗಿ ಮತ್ತು ಸಾರ್ವಜನಿಕ ಅಭಿಪ್ರಾಯ ಪಡೆಯದೆ, ಮಹತ್ವದ ನಿಯಮಗಳಿಗೆ ಅತಿ ಕನಿಷ್ಠ ರೀತಿಯಲ್ಲಿ ತಿದ್ದುಪಡಿ ಮಾಡಲು ಅನುಮತಿಸಬಾರದಿತ್ತು" ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಏನೆಲ್ಲಾ ತಿದ್ದುಪಡಿ?: ಚುನಾವಣೆಗೆ ಸಂಬಂಧಿಸಿದ ದಾಖಲೆಗಳಾದ ಸಿಸಿಟಿವಿ ದೃಶ್ಯಗಳು, ವೆಬ್ಕಾಸ್ಟಿಂಗ್ ತುಣುಕುಗಳು, ಅಭ್ಯರ್ಥಿಗಳ ವಿಡಿಯೋಗಳು, ಅಭ್ಯರ್ಥಿಗಳ ನಾಮಪತ್ರ, ಏಜೆಂಟ್ಗಳ ವಿವರ ಸೇರಿದಂತೆ ಎಲ್ಲ ದಾಖಲೆಗಳನ್ನು ಸಾರ್ವಜನಿಕರು ಆಯೋಗದಿಂದ ಪಡೆದುಕೊಳ್ಳಬಹುದಿತ್ತು.
ಆದರೆ, ಈ ದಾಖಲೆಗಳನ್ನು ಪಡೆದುಕೊಂಡ ಬಳಿಕ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ದಾಖಲೆಗಳನ್ನು ಜನರಿಗೆ ನೀಡುವ ಬಗ್ಗೆ ನಿರ್ಬಂಧ ಹೇರಬೇಕು ಎಂದು ಕೋರಿ ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಅದರಂತೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಎಲೆಕ್ಟ್ರಾನಿಕ್ ದಾಖಲೆಗಳ ಬದಲು ಕಾಗದ ಪತ್ರಗಳನ್ನು ಮಾತ್ರ ಜನರಿಗೆ ನೀಡಲು ಕೇಂದ್ರ ಅನುಮತಿಸಿದೆ. ಈ ನಿಯಮ ಅಭ್ಯರ್ಥಿಗಳಿಗೆ ಅನ್ವಯಿಸಲ್ಲ. ಜನರು ತಮಗೆ ಈ ದಾಖಲೆಗಳು ಬೇಕಾದಲ್ಲಿ ಕೋರ್ಟ್ ಅನುಮತಿ ಪಡೆದುಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಆರೋಪ: ಕಾಂಗ್ರೆಸ್ಗೆ ಇಸಿ ನೀಡಿದ ಸ್ಪಷ್ಟನೆ ಹೀಗಿದೆ